ಬೆಂಗಳೂರು: ತುಮಕೂರಿನಲ್ಲಿ ವೈದ್ಯರ ನಿರ್ಲಕ್ಷದಿಂದ ಬಾಣಂತಿ ನವಜಾತ ಶಿಶುಗಳ ಸಾವು ಪ್ರಕರಣ ಹಿನ್ನೆಲೆ, ವೈದ್ಯೆ, ಸಿಬ್ಬಂದಿ ವಿರುದ್ದ ಕಠಿಣ ಕ್ರಮಕ್ಕೆ ಶಾಸಕಿ ಅನಿತಾ ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಶಾಸಕಿ ಅನಿತಾ ಕುಮಾರಸ್ವಾಮಿ ರವರು, ಅಮಾನತ್ತು ಶಿಕ್ಷೆಗಿಂತ ಕಠಿಣ ಕ್ರಮ ಜರುಗಿಸಬೇಕು.
ಸರಣಿ ಟ್ವಿಟ್ ಮೂಲಕ ಶಾಸಕಿ ಅನಿತಾ ಕುಮಾರಸ್ವಾಮಿ ಆಗ್ರಹ. ಬಾಣಂತಿ, ಎರಡು ನವಜಾತ ಶಿಶುಗಳು ಧಾರುಣ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿ. ವೈದ್ಯೆಯ ಅಸೂಕ್ಷ್ಮತೆ, ಅಮಾನವೀಯತೆಯ ಕಾರಣಕ್ಕೆ ಮೂರು ಜೀವಗಳು ಬಲಿಯಾಗಿವೆ.
ನಮ್ಮ ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಇದು ಸಾಕ್ಷಿ. ಬಾಣಂತಿಯ ಸಾವು ಆರು ವರ್ಷದ ಇನ್ನೊಂದು ಹೆಣ್ಣು ಮಗುವನ್ನು ತಬ್ಬಲಿ ಮಾಡಿದೆ. ಸಕಾಲಕ್ಕೆ ವೈದ್ಯೆ ಹೆರಿಗೆ ಮಾಡಿಸಿದ್ದಿದ್ದರೆ ಆಕೆಯ ಜತೆಗೆ, ಆ ಅವಳಿ ಕಂದಮ್ಮಗಳು ಉಳಿಯುತ್ತಿದ್ದವು. ಈ ಘಟನೆ ನನಗೆ ಬಹಳ ದುಃಖ ಉಂಟು ಮಾಡಿದೆ. ತುರ್ತು ಸಂದರ್ಭದಲ್ಲಿ ವೈದ್ಯರು, ಸಿಬ್ಬಂದಿ ಸಂಕಷ್ಟದಲ್ಲಿರುವ ಜನರಿಗೆ ಚಿಕಿತ್ಸೆ ಕೊಟ್ಟು ಜೀವ ಉಳಿಸಬೇಕೆ ಹೊರತು ದಾಖಲೆ ಕೇಳಿ ಜೀವ ತೆಗೆಯುವುದಲ್ಲ. ಚಿಕಿತ್ಸೆ ನೀಡಿದ ನಂತರ ದಾಖಲೆಗಳನ್ನು ಪಡೆಯಬಹುದಾಗಿತ್ತು. ವೈದ್ಯೋ ನಾರಾಯಣೋ ಹರಿಃ ಎನ್ನುವ ಕೀರ್ತಿಗೆ ಆ ವೈದ್ಯೆ ನಿಜಕೂ ಕಪ್ಪುಚುಕ್ಕೆ.
ರಾಜ್ಯ ಬಿಜೆಪಿ ಸರಕಾರ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಮುಂದೆ ಇಂಥ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು. ಕರ್ತವ್ಯಲೋಪ ಎಸಗಿದ ತುಮಕೂರು ಜಿಲ್ಲಾಸ್ಪತ್ರೆಯ ಸಿಬ್ಬಂದಿ, ವೈದ್ಯೆಯ ವಿರುದ್ಧ ಅಮಾನತು ಶಿಕ್ಷೆಗಿಂತ ಕಠಿಣ ಕ್ರಮ ಜರುಗಿಸಬೇಕು. ಸರಣಿ ಟ್ವಿಟ್ ಮೂಲಕ ಶಾಸಕಿ ಅನಿತಾ ಕುಮಾರಸ್ವಾಮಿ ಒತ್ತಾಯ ಮಾಡಿದ್ದಾರೆ.