ಬೆಂಗಳೂರು : ಅಕ್ಟೋಬರ್-4 ರಂದು ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ. ಈ ಬಾರಿ ಕೋವಿಡ್ ಇಳಿಕೆಯಾಗಿರೋ ಕಾರಣದಿಂದ ಎಲ್ಲೆಡೆ ಅದ್ದೂರಿ ದಸರಾ ಆಚರಣೆಗೆ ಸಿದ್ದತೆ ನಡೆಸಿದೆ. ಬಿಎಂಟಿಸಿಯಲ್ಲಿಯೂ ವರ್ಷವಿಡೀ ತಾವು ಬಳಸುವ ಬಸ್‌ಗಳನ್ನು ಸ್ವಚ್ಛಗೊಳಿಸಿ, ಸಿಂಗರಿಸಿ ಪೂಜೆ ಮಾಡುವುದೇ ಡ್ರೈವರ್ಸ್-ಕಂಡಕ್ಟರ್‍ಸ್‌ಗೆ ಎಲ್ಲಿಲ್ಲದ ಸಂಭ್ರಮ. ಬೇರೆ ಯಾವುದೇ ಹಬ್ಬ ಹರಿದಿನಗಳಲ್ಲಿ ಸಂಭ್ರಮಿಸದಷ್ಟು ಖುಷಿ, ಸಂತೋಷವನ್ನು ಆಯುಧಪೂಜೆಯಲ್ಲಿ ಅನುಭವಿಸುತ್ತಾರೆ. ಇದು ಆಡಳಿತ ಮಂಡಳಿಗೂ ಗೊತ್ತು. ಹಾಗಾಗಿಯೇ ಬಸ್‌ಗಳ ಸ್ವಚ್ಛತೆ ಹಾಗೂ ಸಿಂಗಾರಕ್ಕೆ ಒಂದಷ್ಟು ಹಣವನ್ನು ಬಿಡುಗಡೆ ಮಾಡುವ ಸಂಪ್ರದಾಯವೂ ನಿಗಮದಲ್ಲಿ ಇದೆ.
ಆದರೆ ಬಸ್‌ಗಳ ಸ್ವಚ್ಛತೆ, ಸಿಂಗಾರ ಹಾಗೂ ಪೂಜೆಗೆ ಬೇಕಾದಷ್ಟು ಹಣವನ್ನು ಬಿಡುಗಡೆ ಮಾಡಬೇಕಲ್ಲವೇ. ನಿಮಗೆ ಆಶ್ಚರ್ಯವಾಗಬಹುದು. ಆಡಳಿತ ಮಂಡಳಿ ಪ್ರತಿಯೊಂದು ಡಿಪೋಗೂ ಬಿಡುಗಡೆ ಮಾಡುವ ಹಣ ಎಷ್ಟು ಗೊತ್ತೇ? ಈ ಬಾರಿ ಸುತ್ತೋಲೆಯಲ್ಲಿ ಪ್ರತಿ ಬಸ್ಗೆ 100 ರೂ, ತಲಾ ಕಾರ್ ಹಾಗೂ ಜೀಪುಗೆ 40.ಈ ಪುಡಿಕಾಸು ಹಣ ಬಿಡುಗಡೆ ಮಾಡಿರೋದಕ್ಕೆ ಸಿಬ್ಬಂದಿ ಕಂಗಾಲಾಗಿದ್ದಾರೆ.
ಯಾವಾಗಲೂ ಹೂವು-ಬಾಳೆ ಕಂದು-ತೋರಣಗಳನ್ನು ಖರೀದಿಸಿ ಬಸ್ ಗಳನ್ನು ಚೆನ್ನಾಗಿ ತೊಳೆದು ಮದುವಣಗಿತ್ತಿಯಂತೆ ಸಿಂಗರಿಸಿ ಸಂಭ್ರಮಿಸುವುದು ಅವರ ವಾಡಿಕೆ. ಬಸ್ ಗಳನ್ನು ತೇರಿನಂತೆ ಆಲಂಕರಿಸಿ ದೊಡ್ಡದಾದ ಧ್ವನಿಯಲ್ಲಿ ಹಾಡನ್ನು ಹಾಕಿ, ಒಂದು ಸುತ್ತು ಹಾಕಿದರೇನೇ ಆಯುಧಪೂಜೆಗೆ ಸಾರ್ಥಕತೆ. ಆದ್ರೆ ಬಿಎಂಟಿಸಿ ಚಾಲಕ ಹಾಗು ನಿರ್ವಾಹಕರಿಗೆ ಆಯುಧ ಪೂಜೆ ಮಾಡಿ ಎಂದು ಬಿಡಿಗಾಸು ನೀಡಿದೆ. ಇಲಾಖೆಯ ಕಾರು, ಜೀಪುಗಳಿಗೆ 40 ರೂಪಾಯಿ, ವೋಲ್ವೋ ಬಸ್ಗೆ ಕೇವಲ 100 ರೂಪಾಯಿ ಬಿಡುಗಡೆ ಮಾಡಿದೆ. ಅಲ್ಲದೆ ಈ ಹಣದಲ್ಲೇ ಕಚೇರಿ ಆವರಣ ಕ್ಲೀನ್ ಮಾಡಿ, ಶ್ರದ್ಧೆ ಭಕ್ತಿಯಿಂದ ಆಯುಧ ಪೂಜೆ ಮಾಡಿ ಅಂತ ತನ್ನ ಸಿಬ್ಬಂದಿಗೆ ಹೇಳಿದೆ. ದುಬಾರಿ ದುನಿಯಾದ ಇಂದಿನ ದಿನದಲ್ಲಿ ಬೂದುಗುಂಬಳಕಾಯಿಗೇ 40 ರೂಪಾಯಿಗಿಂತ ಹೆಚ್ಚು ನೀಡಬೇಕಾಗಿದೆ. ಆದ್ರೆ, ಬಿಎಂಟಿಟಿಸಿ ಬಿಡುಗಡೆ ಮಾಡಿರುವ ಪುಡಿಗಾಸಿನಲ್ಲಿ ಹೇಗೆ ಆಯುಧ ಪೂಜೆ ಮಾಡೋಕಾಗುತ್ತೆ? ವರ್ಷಕ್ಕೊಮ್ಮೆ ಮಾಡುವ ಆಯುಧ ಪೂಜೆಗೆ ಇಷ್ಟು ಕಡಿಮೆ ಹಣ ನೀಡಿದ್ರೆ ಹೇಗೆ? ನೀವು ಕೊಟ್ಟ ಹಣದಲ್ಲಿ ಆರು ನಿಂಬೆಹಣ್ಣು ಕೂಡಾ ಬರೋದಿಲ್ಲ. ಕೊಡೋದಾದ್ರೆ ಹೆಚ್ಚಿನ ಹಣ ನೀಡಿ ಇಲ್ಲದಿದ್ರೆ ನಿಮ್ಮ ಹಣ ಬೇಡ ಎಂದು ಚಾಲಕ ಹಾಗು ನಿರ್ವಾಹಕರು ಬಿಎಂಟಿಸಿ ಸಂಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಬಸ್ಸಿಗೆ ಸರಳವಾಗಿ ಪೂಜೆ ಮಾಡಬೇಕು ಎಂದರೆ ಎರಡು ಬಾಳೆ ಕಂದು, 4 ಮಾರು ಹೂ, 6 ನಿಂಬೆಹಣ್ಣು, ಬಾಳೆ ಹಣ್ಣು, ತೆಂಗಿನಕಾಯಿ, ಕರ್ಪೂರ ಕುಂಕುಮ, ಬೂದು ಕುಂಬಳಕಾಯಿ, ವಿಭೂತಿ ಬೇಕು.ಆದ್ರೂ ನಿಗಮ ಜಿಪುಣ ತನ ತೋರಿಸಿ ಪೂಜೆ ಗೆ ಬಿಡಿಕಾಸು ನೀಡಿರೋದು ನೌಕರರ ಹಬ್ಬದ ಸಂಭ್ರಮಕ್ಕೆ ತಣ್ಣೀರು ಎರಚಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು