ಬೆಂಗಳೂರು: ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಂಗ್ರೆಸ್ ಪದಾಧಿಕಾರಗಳ ನೇಮಕಕ್ಕೆ ಕಡೆಗೂ ಕಾಲ ಕೂಡಿ ಬಂದಿದೆ. ಕೆಪಿಸಿಸಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಿಗೆ ಸುಮಾರು 300 ಹೆಸರುಗಳ ಪರಿಷ್ಕೃತ ಪಟ್ಟಿಯೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿನ್ನೆ ದೆಹಲಿಗೆ ತೆರಳಿದರು.
ಪದಾಧಿಕಾರಿಗಳ ಪಟ್ಟಿ ಮಾತ್ರವಲ್ಲದೆ, ಸುಮಾರು 20 ಜಿಲ್ಲಾ ಘಟಕಗಳ ಅಧ್ಯಕ್ಷರ ಬದಲಾವಣೆ ಮತ್ತು ಮಹಿಳಾ ಕಾಂಗ್ರೆಸ್, ಹಿಂದುಳಿದವರ ಘಟಕ, ಪರಿಶಿಷ್ಟ ಜಾತಿ- ಪಂಗಡ ಘಟಕ ಸೇರಿದಂತೆ ಹಲವು ಮುಂಚೂಣಿ ಘಟಕಗಳ ಅಧ್ಯಕ್ಷರ ಬದಲಾವಣೆಯ ಪ್ರಸ್ತಾವನೆ ಸಹಿತ ಅಧ್ಯಕ್ಷರು ದೆಹಲಿಗೆ ತೆರಳಿದ್ದು, ಪಟ್ಟಿಗಳ ಕುರಿತು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರೊಂದಿಗೆ ಚರ್ಚಿಸಿ ಪಟ್ಟಿ ಅಂತಿಮಗೊಳಿಸಲಿದ್ದಾರೆ. ಮೂಲಗಳ ಪ್ರಕಾರ ಮುಂದಿನ ವಾರದೊಳಗೆ ಪದಾಧಿಕಾರಗಳ ನೇಮಕ ಆದೇಶ ಹೊರ ಬೀಳುವ ಸಾಧ್ಯತೆಯಿದೆ.