ಬೆಂಗಳೂರು : ಉದ್ಯೋಗ, ವ್ಯವಹಾರದ ನಿಮಿತ್ತ ರಾಜ್ಯದ ನಾನಾ ಭಾಗಗಳಿಂದ ಬೆಂಗಳೂರಿನಲ್ಲಿ ಬಂದು ನೆಲೆಸಿದವರು ದಸರಾ ಹಬ್ಬಕ್ಕೆ ಅಂತ ತಮ್ಮ ತಮ್ಮ ಊರಿಗೆ ತೆರಳಲು ಸಜ್ಜಾಗಿದ್ದಾರೆ. ಆದರೆ, ಖಾಸಗಿ ಬಸ್‌ಗಳು ಇದನ್ನೇ ಬಂಡವಾಳ ಮಾಡ್ಕೊಂಡು ಪ್ರಯಾಣಿಕರ ಬಳಿ ಸುಲಿಗೆ ಮಾಡ್ತಿವೆ. ಸಾಮಾನ್ಯ ದಿನಗಳಲ್ಲಿ 500ರಿಂದ 600 ರೂ.ಗಳ ಟಿಕೆಟ್ ದರ ಇದ್ದ ಸ್ಥಳಗಳಿಗೆ ಈಗ 900 ರಿಂದ 1500 ರೂ.ವರೆಗೂ ದರ ವಿಧಿಸಲಾಗುತ್ತಿದೆ. ಹಬ್ಬದ ಹಿನ್ನೆಲೆಯಲ್ಲಿ ಕೆಲವರು ಮುಂದಾಲೋಚನೆಯಿಂದಲೇ ಹೆಚ್ಚಿನ ರಜೆಗಳನ್ನು ಹಾಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಬ್ಬಕ್ಕೆ ಮುಂಚಿತವಾಗಿಯೇ ಹೊರಟಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಖಾಸಗಿ ಬಸ್ ಮಾಲೀಕರು ಮನಬಂದಂತೆ ದರಗಳನ್ನು ವಿಧಿಸಿ ಪ್ರಯಾಣಿಕರ ಕೆಂಗಣ್ಣಿಗೆ ಕಾರಣವಾಗಿದ್ದಾರೆ.
ಈಗಾಗಲೇ ಬಸ್‌ಗಳೆಲ್ಲವೂ ಫುಲ್ ಆಗಿದ್ದು, ಹಬ್ಬಕ್ಕೆ ಹೊರಟು ನಿಂತವರಿಗೆ ಬಸ್‌ಗಳಲ್ಲಿ ಸೀಟು ಕಾಯ್ದಿರಿಸುವುದೇ ಸವಾಲಾಗಿದೆ. ಕಾರಣ ಯಾವುದೇ ಆನ್‌ಲೈನ್ ಬುಕ್ಕಿಂಗ್ ವೆಬ್‌ಸೈಟ್‌ಗಳನ್ನು ನೋಡಿದರೂ ‘ಬಸ್‌ಗಳು ಫುಲ್’ ಎಂಬ ಮಾಹಿತಿ ಸಿಗುತ್ತದೆ. ಆಯಾ ಟ್ರಾವೆಲ್ಸ್‌ಗೆ ಕರೆ ಮಾಡಿದರೆ ದುಬಾರಿ ದರ ಹೇಳುತ್ತಾರೆ. ಕೇಳಿದ್ರೆ ಹಬ್ಬದ ಸೀಜನ್ ಇದೆ. ಎಲ್ಲರೂ ಪ್ರಯಾಣ ದರ ಹೆಚ್ಚು ಮಾಡಿದ್ದಾರೆ, ನಾವೂ ಮಾಡಿದ್ದೇವೆ ಎಂಬ ಉತ್ತರ ನೀಡುತ್ತಾರೆಂತೆ. ಅದರೆ ಸರ್ಕಾರ ಮಾತ್ರ ಖಾಸಗಿ ಬಸ್ ದರಕ್ಕೆ ಕಡಿವಾಣ ಮಾತ್ರ ಹಾಕುತ್ತಿಲ್ಲ.
ಹಬ್ಬದ ಸೀಸನ್ ಬಂದಾಗ ಜನದಟ್ಟಣೆ ನಿಯಂತ್ರಿಸಲು KSRTC ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತದೆ. ಅದೇ ರೀತಿ ಈ ಬಾರಿಯೂ ಹೆಚ್ಚುವರಿ ಬಸ್ ಬಿಟ್ಟಿದೆ. ಆದರೂ ಖಾಸಗಿ ಬಸ್ಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಹತ್ತಾರು ಟ್ರಾವೆಲ್ಸ್ ಸಂಸ್ಥೆಗಳು ಮಂಗಳೂರು, ಉಡುಪಿ, ಕುಂದಾಪುರ, ಶಿವಮೊಗ್ಗ, ಕಾರವಾರ ಸೇರಿದಂತೆ ನಾನಾ ಊರುಗಳಿಗೆ ನೂರಾರು ಬಸ್‌ಗಳನ್ನು ಓಡಿಸುತ್ತವೆ. ಇಂತಹ ಕಡೆಗಳಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಕಂಡು ಬರುತ್ತಿದೆ. ಬೆಂಗಳೂರಿನಿಂದ ಉಡುಪಿಗೆ ಸಾಮಾನ್ಯ ದಿನಗಳಲ್ಲಿ ಪ್ರಯಾಣ ದರ ಎಸಿ ಸ್ಲೀಪರ್, ಕ್ಲಬ್ ಕ್ಲಾಸ್ ಸೇರಿದಂತೆ ವಿವಿಧ ಖಾಸಗಿ ಬಸ್‌ಗಳಲ್ಲಿ 700- 750 ರು. ಇದ್ದು, ಸೆ. 30ರಿಂದ ಅ. 4ರವರೆಗೆ 1,400ರಿಂದ 1,800 ರು. ಆಗಿದೆ. ಅದೇ ರೀತಿ, ಬೆಳಗಾವಿಗೆ 800-900 ರು. ಇದ್ದದ್ದು, 1,100ರಿಂದ 1,500 ರು. ಆಗಿದೆ. ಹುಬ್ಬಳ್ಳಿಗೆ 750-800 ರು. ಬದಲಿಗೆ 1,200ರಿಂದ 1,500 ರು. ಆಗಿದೆ. ಆದ್ರೂ ಸಾರಿಗೆ ಇಲಾಖೆ ಅಧಿಕಾರಿಗಳು ಯಾವದೇ ಕ್ರಮ ಕೈಗೊಳ್ಳದೆ ಸೈಲೆಂಟ್ ಆಗಿದ್ದಾರೆ.
ಒಟ್ಟಾರೆ ಪ್ರತೀವರ್ಷ ಇದೇ ಸಮಸ್ಯೆ ಕಾಡುತ್ತಿದೆ. ಆದರೆ, ಸರ್ಕಾರ ಈ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುತ್ತಿಲ್ಲ..ಈ ಬಾರಿಯಾದರೂ ಖಾಸಗಿ ಬಸ್ ದರಕ್ಕೆ ಕಡಿವಾಣ ಹಾಕಿದರೆ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು