Tuesday, November 26, 2024

ತಲೈವಾ ಮೆಚ್ಚಿದ 777 ಚಾರ್ಲಿ ದುಬೈನತ್ತ ರಕ್ಷಿತ್ ಟೀಂ

ಸಿನಿಮಾ ಅಂದ್ರೆ ಸೆಳೆತ.. ಅದು ಹೃದಯಗಳ ಮಿಡಿತ. ಆಗಲೇ ಅದಕ್ಕೊಂದು ಅರ್ಥ. ನೋಡುಗರ ಮನದಲ್ಲಿ ನೆಲೆ ಸಿಗಲು ಸಾಧ್ಯ. ಸದ್ಯ ಹಾಗೆ ಎಲ್ಲಾ ಆ್ಯಂಗಲ್​ನಿಂದ ಪ್ರೇಕ್ಷಕರ ನಾಡಿಮಿಡಿತ ಹೆಚ್ಚಿಸಿರೋ ಚಿತ್ರ 777 ಚಾರ್ಲಿ. ಚಿತ್ರಪ್ರೇಮಿಗಳ ಜೊತೆ ಸಿಎಂ, ಸಾಯಿ ಪಲ್ಲವಿ ಸೇರಿದಂತೆ ಎಲ್ರೂ ಸೈ ಅಂದ್ರು. ಇದೀಗ ಸೂಪರ್ ಸ್ಟಾರ್ ರಜಿನಿ ಚಿತ್ರದ ಮೈಲೇಜ್ ಹೆಚ್ಚಿಸಿರೋದು ಇಂಟರೆಸ್ಟಿಂಗ್.

ತಲೈವಾ ಮೆಚ್ಚಿದ 777 ಚಾರ್ಲಿ.. ದುಬೈನತ್ತ ರಕ್ಷಿತ್ ಟೀಂ

ರಕ್ಷಿತ್ ಶೆಟ್ಟಿಗೆ ಕರೆ ಮಾಡಿದ ರಜಿನೀಕಾಂತ್ ಹೇಳಿದ್ದೇನು..?

ಎರಡೇ ವಾರಕ್ಕೆ 70 ಕೋಟಿ.. ಶತಕೋಟಿಯತ್ತ ಹೆಜ್ಜೆ..!

ದುಬೈನಲ್ಲಿ ತಂಡದಿಂದ ಹಿಂದಿ & ಕನ್ನಡ ಸ್ಪೆಷಲ್ ಶೋ

ಭಾವನಾತ್ಮಕ ಅಂಶಗಳ ಭಾವತೋರದ ಹೊಸ ಲೋಕ 777 ಚಾರ್ಲಿ ನೋಡುಗರನ್ನ ಮಂತ್ರಮುಗ್ಧಗೊಳಿಸ್ತಿದೆ. ಇದೊಂದು ಸಿನಿಮಾ ಆಗಷ್ಟೇ ಅಲ್ಲದೆ, ಮನುಷ್ಯ ಹಾಗೂ ನಾಯಿಯ ನಡುವಿನ ಅನುಬಂಧದ ಅನ್ವರ್ಥ ಅನಿಸಿದೆ. ಬರೀ ಹಾಲಿವುಡ್ ಸಿನಿಮಾಗಳಲ್ಲೇ ಇದ್ದಂತಹ ನಾಯಿ ಪ್ರಧಾನ ಸಿನಿಮಾನ ಭಾರತೀಯ ಚಿತ್ರರಂಗದಲ್ಲೂ ಮಾಡಿ ತೋರಿಸಿದೆ ರಕ್ಷಿತ್ ಶೆಟ್ಟಿ ಅಂಡ್ ಟೀಂ.

ಚಾರ್ಲಿ ಮಾಡ್ತಿರೋ ಮೋಡಿಗೆ ಎರಡೇ ವಾರದಲ್ಲಿ ಬಾಕ್ಸ್ ಆಫೀಸ್​ನಲ್ಲಿ 70 ಕೋಟಿ ಪೈಸಾ ವಸೂಲ್ ಆಗೋದ್ರ ಜೊತೆ ವಿಶ್ವದ ಮೂಲೆ ಮೂಲೆಯಿಂದ ಒಳ್ಳೆಯ ಪ್ರಶಂಸೆ ಹಾಗೂ  ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬರ್ತಿದೆ. ಕಿರಣ್​​ರಾಜ್ ನಿರ್ದೇಶನದ ಹಾಗೂ ರಕ್ಷಿತ್ ಶೆಟ್ಟಿ ನಟನೆಯ ಈ ಸಿನಿಮಾದಲ್ಲಿ ಚಾರ್ಲಿ ಅನ್ನೋ ಶ್ವಾನ ಹಾಗೂ ಕರ್ಣನ ಜರ್ನಿ ನೋಡುಗರನ್ನ ಮೂಕವಿಸ್ಮಿತಗೊಳಿಸಲಿದೆ.

ಸಿಎಂ ಬಸವರಾಜ ಬೊಮ್ಮಾಯಿ, ಬಹುಭಾಷಾ ನಟಿ ಸಾಯಿ ಪಲ್ಲವಿ ಸೇರಿದಂತೆ ಲಕ್ಷಾಂತರ ಮಂದಿ ಸಿನಿರಸಿಕರು 777 ಚಾರ್ಲಿ ಸಿನಿಮಾನ ಮೆಚ್ಚಿದ್ದು ಗೊತ್ತೇಯಿದೆ. ಆದ್ರೆ ಸೂಪರ್ ಸ್ಟಾರ್ ರಜಿನೀಕಾಂತ್ ಕೂಡ ಚಾರ್ಲಿ ನೋಡಿ ದಿಲ್​ಖುಷ್ ಆಗಿರೋದು ಲೇಟೆಸ್ಟ್ ಖಬರ್. ಹೌದು.. ತಲೈವಾ ರಜಿನಿ ರೀಸೆಂಟ್ ಆಗಿ ಚಾರ್ಲಿಯನ್ನ ನೋಡಿ, ಖುದ್ದು ರಕ್ಷಿತ್ ಶೆಟ್ಟಿಗೆ ಕರೆ ಮಾಡಿ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ವ್ಯಕ್ತಪಡಿಸಿದ್ದಾರೆ.

ರಜಿನೀಕಾಂತ್ ಕರೆ ಮಾಡಿ ಭೇಷ್ ಎಂದ ವಿಷಯವನ್ನು ಸ್ವತಃ ರಕ್ಷಿತ್ ಅವ್ರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅದ್ರಲ್ಲೂ ಕ್ಲೈಮ್ಯಾಕ್ಸ್ ಬಗ್ಗೆ ಸ್ಟೈಲ್ ಕಿಂಗ್ ಶಿವಾಜಿ ಸಿಕ್ಕಾಪಟ್ಟೆ ಕೊಂಡಾಡಿದ್ರಂತೆ. ಒಬ್ಬ ಕಲಾವಿದನಿಗೆ ಇದಕ್ಕಿಂತ ಬಹುದೊಡ್ಡ ಕಾಂಪ್ಲಿಮೆಂಟ್ ಮತ್ತೇನು ಬೇಕು ಅಲ್ಲವೇ..?

ಸದ್ಯ ರಜಿನೀಕಾಂತ್​​ರಿಂದ ಪ್ರಶಂಸೆಗೆ ಒಳಗಾಗಿರೋ ಚಾರ್ಲಿ ಟೀಂ ದುಬೈನಲ್ಲಿ ಬೀಡು ಬಿಟ್ಟಿದೆ. ಅಲ್ಲಿ ಕೂಡ ಪ್ರೊಮೋಷನ್ಸ್ ಮಾಡ್ತಿದ್ದು, ಈಗಾಗ್ಲೇ ಹಿಂದಿ ಸ್ಪೆಷಲ್ ಶೋ ಕಂಡಕ್ಟ್ ಮಾಡಿದೆ. ಇಂದು ಕನ್ನಡ ಅವತರಣಿಕೆಯ ವಿಶೇಷ ಪ್ರದರ್ಶನ ನಡೆಸಲಿರೋ ರಕ್ಷಿತ್ ತಂಡ, ಅದಾದ ಬಳಿಕ ಮತ್ತೆ ಬೆಂಗಳೂರಿಗೆ ವಾಪಸ್ಸು ಬಂದು ವಿಜಯಯಾತ್ರೆ ತೆರಳಲಿದೆಯಂತೆ.

ಪ್ರಾಮಾಣಿಕ ಪ್ರಯತ್ನಗಳಿಗೆ ಸೋಲು ಅನ್ನೋದು ಇರಲ್ಲ ಅನ್ನೋದಕ್ಕೆ 777 ಚಾರ್ಲಿ ಒಂದು ಬೆಸ್ಟ್ ಎಕ್ಸಾಂಪಲ್. ಯಾಕಂದ್ರೆ ನಾಯಕ ಪ್ರಧಾನದ ಜೊತೆ ನಾಯಿ ಪ್ರಧಾನ ಸಿನಿಮಾ ಮಾಡೋದು ಎಷ್ಟು ಚಾಲೆಂಜ್ ಅನ್ನೋದು ಪ್ರತಿಯೊಬ್ಬ ಮೇಕರ್​ಗೂ ಗೊತ್ತು. ಸಿನಿಮಾ ನೋಡುವಂತಹ ವೀಕ್ಷಕನಿಗೂ ಅರಿವಿದೆ. ಹಾಗಾಗಿ ಇವ್ರ ಹಾನೆಸ್ಟ್ ಎಫರ್ಟ್​ಗೆ ಇಡೀ ಸಿನಿದುನಿಯಾ ಸಲಾಂ ಅಂತಿದೆ. ಇಂತಹ ಪ್ರಯೋಗಗಳು ಮತ್ತಷ್ಟು ಮಗದಷ್ಟು ಬರಲಿ ಅನ್ನೋದು ನಮ್ಮ ಆಶಯ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES