ಯಾವುದೇ ಶಾಶ್ವತ ನದಿ-ನಾಲೆಗಳಿಲ್ಲದ ಬಯಲು ಸೀಮೆಯ ಚಿನ್ನದ ನಾಡಿಂದು ಕ್ಷೀರ ನಾಡು. ಹೈನುಗಾರಿಕೆಯೇ ಇಲ್ಲಿನ ಬಹಳಷ್ಟು ರೈತರನ್ನ ಕಾಪಾಡುತ್ತಿದೆ.ರೈತರಿಂದಲೇ ಬೆಳೆದು ನಿಂತಿರುವ ಹಾಲು ಒಕ್ಕೂಟ ವ್ಯವಸ್ಥೆ ಈಗ ನಷ್ಟ ಅನುಭವಿಸುತ್ತಿದೆ. ಅಲ್ಲಿ ಉತ್ಪಾದನೆಯಾಗುವ ಉತ್ಪನ್ನಗಳು ಗೋಡೌನ್‌ಗಳಲ್ಲೇ ಕೊಳೆಯುವ ಸ್ಥಿತಿ ನಿರ್ಮಾಣವಾಗಿದೆ.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ನಷ್ಟದಲ್ಲಿದೆ ಅನ್ನೋ ಮಾತು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಹೀಗಿರುವಾಗಲೇ ಹಾಲು ಒಕ್ಕೂಟವನ್ನು ವಿಂಗಡಿಸಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನ ಪ್ರತ್ಯೇಕ ಮಾಡುವ ಪ್ರಕ್ರಿಯೆ ಸಹ ನಡೆಯುತ್ತಿದೆ. ಒಕ್ಕೂಟದಲ್ಲಿ 60 ಕೋಟಿ ರೂ. ಮೌಲ್ಯದ ಹಾಲಿನ ಪುಡಿ ಹಾಗೂ ಬೆಣ್ಣೆ ಕೇಳುವವರಿಲ್ಲದೆ ಗೋಡೌನ್ನಲ್ಲಿ ಕೊಳೆಯುತ್ತಿದೆ. ಕೊರೋನಾ ಲಾಕ್ಡೌನ್ ಸಮಯದಲ್ಲಿ ಹಾಲಿನ ಮಾರಾಟ ನಿರೀಕ್ಷಿತ ಮಟ್ಟದಲ್ಲಿ ನಡೆಯಲಿಲ್ಲ. ಇದ್ರಿಂದ ಹೆಚ್ಚಿನ ಹಾಲನ್ನ ಪೌಡರ್ ಹಾಗೂ ಬೆಣ್ಣೆ ಮಾಡಲಾಗಿದೆ
ಸದ್ಯ ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ 913 ಮೆಟ್ರಿಕ್ ಟನ್ ಬೆಣ್ಣೆ ಮಾರಾಟವಾಗದೆ ಉಳಿದಿದ್ದರೆ, 1099 ಮೆಟ್ರಿಕ್ ಟನ್ ಹಾಲಿನ ಪುಡಿ ಮಾರಾಟವಾಗದೆ ಉಳಿದಿದೆ.ಒಕ್ಕೂಟದ ಅಧಿಕಾರಿಗಳ ಅಂಕಿ ಅಂಶದ ಪ್ರಕಾರ ಕೋಲಾರ – ಚಿಕ್ಕಬಳ್ಳಾಪುರ ಹಾಲು ಒಕ್ಕೂಟ 28 ಕೋಟಿ ರೂಪಾಯಿ ನಷ್ಟದಲ್ಲಿದೆ ಅಂತ ಹೇಳಲಾಗುತ್ತಿದೆ.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಡಿಯಲ್ಲಿ 1800 ಹಾಲು ಉತ್ಪಾದಕರ ಸಂಘಗಳಿವೆ. ಇದ್ರಿಂದ ಪ್ರತಿನಿತ್ಯ 8.5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಒಕ್ಕೂಟದ ಆಡಳಿತ ಮಂಡಳಿಯ ಏರುಪೇರು, ಮಾರುಕಟ್ಟೆ ವಿಸ್ತರಣೆ ಮಾಡದೆ ಇರುವುದೇ ಕೋಚಿಮುಲ್ ನಷ್ಟದಲ್ಲಿರಲು ಕಾರಣ. ಗೋಡೌನ್ನಲ್ಲಿರೋ 60 ಕೋಟಿಯಷ್ಟು ಮೌಲ್ಯದ ಮಿಲ್ಕ್ ಪೌಡರ್, ಬೆಣ್ಣೆಯನ್ನ ಬೇಗ ಮಾರಾಟವಾದರೆ ಒಕ್ಕೂಟ ನಷ್ಟದಿಂದ ಹೊರಬರಲು ಅನುಕೂಲವಾಗಲಿದೆ ಅಂತಾರೆ ನಿರ್ದೇಶಕರು.
ಕೋಲಾರ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಸದ್ಯ ಮಾರಾಟವಾಗದೆ ಉಳಿದ ಹಾಲಿನ ಉತ್ಪನ್ನಗಳನ್ನ ಮಾರಾಟ ಮಾಡ್ಬೇಕಿದೆ.ಇದ್ರಿಂದ ಒಕ್ಕೂಟ ನಷ್ಟದ ಸುಳಿಯಿಂದ ಹೊರ ಬರಲು ಸಾಧ್ಯವಾಗಲಿದೆ. ಒಕ್ಕೂಟದ ನಿರ್ದೇಶಕರು, ಅಧಿಕಾರಿ ವರ್ಗ ಹಾಗೂ ಸರ್ಕಾರ ಒಗ್ಗೂಡಿ ಕೆಲಸ ಮಾಡಿದ್ರೆ ಮಾತ್ರ ಒಕ್ಕೂಟ ನಷ್ಟದಿಂದ ಹೊರಬರಲು ಸಾಧ್ಯವಾಗಲಿದೆ.