Saturday, September 28, 2024

ನಟ ದರ್ಶನ್ ಪ್ರಕರಣದಲ್ಲಿ ಹೇಳಿಕೆ ನೀಡುವಾಗ ಎಚ್ಚರ!: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್​ ಕಸ್ಟಡಿಯಲ್ಲಿರುವ ನಟ ದರ್ಶನ್‌ ಪ್ರಕರಣದ ವಿಚಾರದಲ್ಲಿ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಅವರು ಸಂಪುಟ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣದಲ್ಲಿ ಸಾರ್ವಜನಿಕ ಅಭಿಪ್ರಾಯ ದರ್ಶನ್‌ ವಿರುದ್ಧವಾಗಿದ್ದು, ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಹಾಗಾಗಿ, ಪ್ರಕರಣದಿಂದ ಸಾಧ್ಯವಾದಷ್ಟೂ ಅಂತರ ಕಾಯ್ದುಕೊಳ್ಳಬೇಕು ಎಂದು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಈ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​​ ನಂಬಿ ಸಿನಿಮಾಗೆ ಹಣ ಹಾಕಿದ್ದ ನಿರ್ಮಾಪಕರಿಗೆ 30 ಕೋಟಿ ಸಂಕಷ್ಟ!

”ಪ್ರಕರಣದ ಕುರಿತು ಪ್ರತಿಕ್ರಿಯಿಸುವುದು ಮತ್ತು ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದು ಬೇಡ,” ಎಂದು ಸಿಎಂ ಸೂಚಿಸಿದರು ಎಂದು ತಿಳಿದುಬಂದಿದೆ. ದರ್ಶನ್‌ ಪರ ಪ್ರಭಾವಿ ಸಚಿವರೊಬ್ಬರು ಸಹಾನುಭೂತಿ ಹೊಂದಿದ್ದು, ಪಾರು ಮಾಡಲು ಪ್ರಯತ್ನ ನಡೆಸಿದ್ದಾರೆ ಎಂಬ ಗುಸುಗುಸು ಮಧ್ಯೆ ಮುಖ್ಯಮಂತ್ರಿಗಳ ಈ ಸೂಚನೆ ಮಹತ್ವ ಪಡೆದುಕೊಂಡಿದೆ.

ದರ್ಶನ್ ವಿರುದ್ಧ ಹೆಚ್ಚುವರಿ ಸೆಕ್ಷನ್ ಸೇರ್ಪಡೆ:

ರೇಣುಕಾಸ್ವಾಮಿ ಹತ್ಯೆ ಸಂಬಂಧ ಬಂಧಿತರಾಗಿರುವ ದರ್ಶನ್ ವಿರುದ್ಧ ಅಪರಾಧಿ ಸಂಚು ಸೇರಿದಂತೆ ಇತರೆ ಐಪಿಸಿ ಸೆಕ್ಷನ್‌ಗಳನ್ನು ಪೊಲೀಸರು ಸೇರ್ಪಡೆಗೊಳಿಸಿದ್ದಾರೆ. ಮಾಗಡಿ ರಸ್ತೆಯ ಸುಮನಹಳ್ಳಿ ಜಂಕ್ಷನ್ ಸಮೀಪದ ಮೋರಿಯಲ್ಲಿ ಪತ್ತೆಯಾದ ರೇಣುಕಾಸ್ವಾಮಿ ಮೃತದೇಹದ ಮೇಲಿನ ಗಾಯದ ಗುರುತುಗಳನ್ನು ಆಧರಿಸಿ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಐಪಿಸಿ 302 ರಡಿ ಕೊಲೆ ಪ್ರಕರಣ ದಾಖಲಾಯಿತು. ಬಳಿಕ ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ಕೃತ್ಯದ ಹಿಂದಿನ ಸಂಚು ಬಯಲಾಯಿತು.

RELATED ARTICLES

Related Articles

TRENDING ARTICLES