Friday, September 20, 2024

ನಿಮ್ಮ ಹೃದಯದ ಮಾತು ಕೇಳಿ ಮತ ಚಲಾಯಿಸಿ : ಸಿದ್ದರಾಮಯ್ಯ

ಬೆಂಗಳೂರು : ಬಿಜೆಪಿ ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತದೆ. ಆದರೆ, ಕಾಂಗ್ರೆಸ್​ ಹಸಿವು ಮುಕ್ತ ನಾಡನ್ನು, ಹಸಿವು ಮುಕ್ತ ದೇಶವನ್ನು ನಿರ್ಮಿಸಲು ಹೊರಟಿದೆ. ನಿಮ್ಮ ಹೃದಯದ ಮಾತು ಕೇಳಿ ಮತ ಚಲಾಯಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಅನ್ನಭಾಗ್ಯ ಯೋಜನೆಯ ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವು ತಲಾ 10 ಕೆಜಿ ಅಕ್ಕಿ ಕೊಡಲು ತೀರ್ಮಾನ ಮಾಡಿದ್ದೆವು. ಪ್ರತಿ ಕೆಜಿಗೆ 34 ರೂಪಾಯಿ ಕೊಡ್ತೀವಿ, ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿದ್ದೆವು. ಆದರೂ, ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಜನತೆಗೆ ಅಕ್ಕಿ ಕೊಡಲಿಲ್ಲ ಎಂದು ದೂರಿದರು.

ಬಿಜೆಪಿಗೆ ಹಸಿವು ಮುಕ್ತ ದೇಶ ಬೇಕಾಗಿಲ್ಲ

ಬಿಜೆಪಿ ಬಡವರ, ದುಡಿಯುವವರ, ಶ್ರಮಿಕರ ಪರವಾಗಿ ಇದ್ದಿದ್ದರೆ.. ಈ ನಾಡಿನ ದಲಿತರು, ಶೂದ್ರರು ಮತ್ತು ಹಿಂದುಳಿದವರ ಪರವಾಗಿ ಇದ್ದಿದ್ದರೆ.. ಅಕ್ಕಿ ಕೊಡುತ್ತಿತ್ತು. ಪ್ರಧಾನಿ ಮೋದಿಯವರಿಗೆ, ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಹಸಿವು ಮುಕ್ತ ದೇಶ ಬೇಕಾಗಿಲ್ಲ. ಆದ್ದರಿಂದ ನಿಜವಾಗಿ ನಿಮ್ಮ ಪರವಾಗಿ ಇರುವವರು ಯಾರು ಎನ್ನುವುದನ್ನು ಅರ್ಥ ಮಾಡಿಕೊಳ್ಳಿ ಎಂದು ತಿಳಿಸಿದರು.

ಅನ್ನದಾತರು ದುಡಿದರೆ ದೇಶ ಬದುಕುತ್ತದೆ

ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿ ಆಹಾರ ಭದ್ರತೆ ಮತ್ತು ನರೇಗಾ ಕಾರ್ಯಕ್ರಮಗಳನ್ನು ವಿರೋಧಿಸಿದ್ದರು. ಇವು ಕಾಂಗ್ರೆಸ್ ಜಾರಿಗೆ ತಂದಿದ್ದ ಹಸಿವು ಮುಕ್ತ ಭಾರತದ ಕಾರ್ಯಕ್ರಮಗಳು. ಅನ್ನಭಾಗ್ಯ ಸೇರಿ ಬಡವರು, ಮಧ್ಯಮ ವರ್ಗದವರಿಗೆ ಕೊಟ್ಟ ಭಾಗ್ಯಗಳನ್ನು ಆಡಿಕೊಂಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ದುರಂತ. ಇಂಥಾ ತಪ್ಪುಗಳನ್ನು ಮತ್ತೆ ಮತ್ತೆ ಮಾಡಬೇಡಿ, ಅನ್ನದಾತರು ದುಡಿದರೆ ದೇಶ ಬದುಕುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

RELATED ARTICLES

Related Articles

TRENDING ARTICLES