Friday, September 20, 2024

ಮೋದಿ ಯಾರ ಉದ್ಧಾರಕ್ಕೆ ಸಾಲ ಮಾಡುತ್ತಿದ್ದಾರೆ : ದಿನೇಶ್ ಗುಂಡೂರಾವ್

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರು ಯಾರ ಉದ್ಧಾರಕ್ಕಾಗಿ ಇಷ್ಟೊಂದು ಸಾಲ ಮಾಡುತ್ತಿದ್ದಾರೆ..? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ‘ಸಾಲ ಮಾಡಿ ತುಪ್ಪ ತಿನ್ನು’ ಎನ್ನುವ ಮಾತಿನಂತೆ ಪ್ರಧಾನಿ ಮೋದಿಯವರು ಸಾಲ ಮಾಡಿ ತುಪ್ಪ ತಿನ್ನುವ ಜೊತೆಗೆ ಜಾತ್ರೆಯನ್ನೆ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

2014 ರಲ್ಲಿ 55 ಲಕ್ಷ ಕೋಟಿಯಿದ್ದ ದೇಶದ ಸಾಲ, ಕೇವಲ ಒಂಬತ್ತೂವರೆ ವರ್ಷದಲ್ಲಿ 183 ಲಕ್ಷ ಕೋಟಿಗೆ ಏರುವ ಅಂದಾಜಿದೆ. ಕೇಂದ್ರ ಸರ್ಕಾರ ಗ್ಯಾಸ್ ಸಬ್ಸಿಡಿ ರದ್ದು ಮಾಡಿದೆ. ರಸಗೊಬ್ಬರ ಸಬ್ಸಿಡಿ ರದ್ದು ಮಾಡಿದೆ. ಇಂಧನಗಳ ಬೆಲೆಯನ್ನು ಯದ್ವಾತದ್ವಾ ಏರಿಸಿದೆ. GST ಹೆಸರಲ್ಲಿ ತಿನ್ನುವ ಅನ್ನಕ್ಕೂ ತೆರಿಗೆ ಹಾಕುತ್ತಿದೆ. ಇಷ್ಟು ಸಂಪನ್ಮೂಲ ಸಂಗ್ರಹವಾಗುತ್ತಿದ್ದರೂ ಸಾಲ ಮಾಡುತ್ತಿರುವುದು ಯಾರಿಗಾಗಿ? ಯಾರ ಉದ್ಧಾರಕ್ಕಾಗಿ? ಹೇಳಿ ಮೋದಿಯವರೇ? ಎಂದು ಛೇಡಿಸಿದ್ದಾರೆ.

ಇದು ಮೋದಿಯವರ ಆರ್ಥಿಕ ಅಜ್ಞಾನ

ಸಾಲ ಮತ್ತು GDPಯ ಅನುಪಾತ ಮನ್‌ಮೋಹನ್ ಸಿಂಗ್‌ರವರ ಅವಧಿಯಲ್ಲಿ 66.4% ರಷ್ಟಿತ್ತು. ಇದೇ ಸಾಲ ಮತ್ತು GDP ಅನುಪಾತ ಮೋದಿಯವರ ಅವಧಿಯಲ್ಲಿ 81.6% ಕ್ಕೆ ತಲುಪಿರುವುದನ್ನೂ ಹಣಕಾಸು ಇಲಾಖೆ ಒಪ್ಪಿಕೊಂಡಿದೆ. IMF ಪ್ರಕಾರ ಸಾಲದ ಅನುಪಾತವು 64% ದಾಟಿದರೆ ಸಾಲ ತೀರಿಸುವ ಸಾಮರ್ಥ್ಯ ಅಪಾಯಕಾರಿ ಎನ್ನುತ್ತದೆ. ಇದು ಮೋದಿಯವರ ಆರ್ಥಿಕ ಅಜ್ಞಾನ ಮತ್ತು ಹಣಕಾಸು ಶಿಸ್ತಿನ ವೈಫಲ್ಯವಲ್ಲದೆ ಮತ್ತೇನು? ಎಂದು ಟೀಕಿಸಿದ್ದಾರೆ.

ನೆರೆಯ ಶ್ರೀಲಂಕಾಕ್ಕಿಂತ ಕಡೆಯಾಗಲಿದೆ

ಮೋದಿಯವರು ಭಾರತವನ್ನು ವಿಶ್ವದ ಮೂರನೇ ಆರ್ಥಿಕ ಶಕ್ತಿ ಮಾಡುವುದಾಗಿ ಭಾಷಣ ಬಿಗಿಯುತ್ತಾರೆ. ಆದರೆ, ಮೋದಿಯವರು ಮಾಡುತ್ತಿರುವ ಸಾಲ ಹಾಗೂ ಅವರ ಆರ್ಥಿಕ ನೀತಿಗಳನ್ನು ಗಮನಿಸಿದರೆ ಭಾರತ ಮೂರನೇ ಆರ್ಥಿಕ ಶಕ್ತಿಯಾಗುವುದಿರಲಿ, ನೆರೆಯ ಶ್ರೀಲಂಕಾಕ್ಕಿಂತ ಕಡೆಯಾಗಲಿದೆ. ಈಗಾಗಲೇ ದೇಶವನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿರುವ ಮೋದಿಯವರಿಗೆ ಭಾರತವನ್ನು ವಿಶ್ವದ ಮೂರನೇ ಆರ್ಥಿಕ ಶಕ್ತಿ ಮಾಡುತ್ತೇನೆ ಎಂದು ಹೇಳುವುದು ಆತ್ಮವಂಚನೆ ಎಂದೆನಿಸುವುದಿಲ್ಲವೇ? ಎಂದು ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES