ಬೆಂಗಳೂರು: ಸಾಮಾಜಿಕ ಪಿಡುಗಾಗಿರುವ ಹೆಣ್ಣು ಭ್ರೂಣ ಹತ್ಯೆ, ಭ್ರೂಣ ಲಿಂಗ ಪತ್ತೆಯನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ಕೊನೆಗಾಣಿಸಲು ನಮ್ಮ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಟೇರ ಸಕ್ಸಸ್ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಚಾಲೆಂಜಿಂಗ್ ಸ್ಟಾರ್!
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆಗೆ ಕಡಿವಾಣ ಹಾಕಲು ಆರೋಗ್ಯ ಇಲಾಖೆಯು ಪೊಲೀಸ್ ಇಲಾಖೆ ಸಹಯೋಗದೊಂದಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಟಾಸ್ಕ್ ಫೋರ್ಸ್‌ಗಳನ್ನು ರಚಿಸಿ ಎಲ್ಲಾ ಹೆರಿಗೆ ಆಸ್ಪತ್ರೆ, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ಕಟ್ಟೆಚ್ಚರ ವಹಿಸುತ್ತಿದೆ.
ಹೆಣ್ಣು ಭ್ರೂಣ ಹತ್ಯೆ ತಡೆಗೆ ಈಗಾಗಲೇ ಜಾರಿಯಲ್ಲಿರುವ ಕಾನೂನನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗಿದ್ದು ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ದಂಡದ ಪ್ರಮಾಣ ಹೆಚ್ಚಳ ಮಾಡಲಾಗಿದೆ. ಅಮಾನವೀಯವಾದ ಹೆಣ್ಣು ಭ್ರೂಣ ಹತ್ಯೆಯನ್ನು ಕೊನೆಗಾಣಿಸಿ ರಾಜ್ಯದಲ್ಲಿ ಲಿಂಗ ಸಮಾನತೆಯನ್ನು ಸಾಧಿಸುವತ್ತ ಆರೋಗ್ಯ ಇಲಾಖೆ ಮುಂದಡಿ ಇಟ್ಟಿದೆ ಎಂದು ಅವರು ಹೇಳಿದ್ದಾರೆ.