ವಿಜಯಪುರ : ಲಿಂಗಾಯತರನ್ನ ಓಲೈಕೆ ಮಾಡಲು ಬಿ.ಎಸ್. ಯಡಿಯೂರಪ್ಪರ ಪುತ್ರ ಬಿ.ವೈ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ತಮಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ವಿಜಯೇಂದ್ರ ಅವರನ್ನ ಪ್ರಧಾನಿ ಮೋದಿ, ಅಮೀತ್ ಶಾ ನೇಮಕ ಮಾಡಿದ್ದಾರೆ ಎಂದು ಸಚಿವ ಎಂ.ಬಿ. ಪಾಟೀಲ್ ಕುಟುಕಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದಾರೆ. ಇದೀಗ ಲಿಂಗಾಯತ ಮತಗಳಿಗಾಗಿ ವಿಜಯೆಂದ್ರರನ್ನ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಯಡಿಯೂರಪ್ಪ ಬಳಕೆ ಮಾಡಿಕೊಳ್ಳಲು ವಿಜಯೇಂದ್ರ ನೇಮಕ ಮಾಡಿದ್ದಾರೆ ಎಂದು ಚಾಟಿ ಬೀಸಿದ್ದಾರೆ.
ಸತೀಶ್ ಬಂದು ಮೀಟಿಂಗ್ ಮಾಡಿದ್ದಾರೆ
ವಿಜಯಪುರ ಲೋಕಸಭಾ ಆಕಾಂಕ್ಷಿಗಳ ವಿಚಾರವಾಗಿ ಮಾತನಾಡಿ, ಬಹಳಷ್ಟು ಆಕಾಂಕ್ಷಿಗಳು ಇದ್ದಾರೆ, ಸತೀಶ್ ಜಾರಕಿಹೊಳಿ ಅವರು ಬಂದು ಮೀಟಿಂಗ್ ಮಾಡಿಕೊಂಡು ಹೋಗಿದ್ದಾರೆ. ಅದನ್ನ ಪಕ್ಷದಲ್ಲಿ ಚರ್ಚೆ ಮಾಡಲಾಗುವುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಎಲ್ಲವೂ ನಿರ್ಣಯ ಆಗುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಆ ವಿಡಿಯೋ ನಾನು ನೋಡಿಲ್ಲ
ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಮಾತನಾಡಿದ ವಿಡಿಯೋ ವೈರಲ್ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನನಗೆ ಅದ್ಯಾವುದು ಎಂದು ಗೊತ್ತಿಲ್ಲ, ಸತ್ಯಾಸತ್ಯತೆ ತಿಳಿದುಕೊಂಡು ಮಾತನಾಡುತ್ತೇನೆ. ನಾನು ಅದನ್ನು ನೋಡಿಲ್ಲ, ಸತ್ಯಾಸತ್ಯತೆ ತಿಳಿದುಕೊಳ್ಳಬೇಕಾಗುತ್ತೆ. ವಿಡಿಯೋ ನಿಮ್ಮದು (ಮಾಧ್ಯಮದವರದ್ದು) ಮಾಡಬಹುದು ಈಗ ಎಂದು ಹೇಳಿದ್ದಾರೆ.
ಹಸಿರು ಇರೋ ಶರ್ಟ್ ಕೆಂಪು ಮಾಡಬಹುದು
ಈಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಂದಿದೆ. ಹಿಂದೆ ನಂದೇ ಒಂದು ಒಬ್ಬ ಮಿಮಿಕ್ರಿ ಮಾಡಿದ್ದ ಮಹಾರಾಷ್ಟ್ರದವ. ಅವನನ್ನು ಅರೆಸ್ಟ್ ಮಾಡಿಸಿ ಜೈಲಿಗೆ ಹಾಕಿದ್ವಿ, ನಾಟಕ ಮಾಡುವವನು ಅವಾ, ಮಿಮಿಕ್ರಿ ಮಾಡ್ತಿದ್ದ ಅವಾ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಂದಿದೆ, ಏನು ಬೇಕಾದ್ರೂ ಬದಲಾವಣೆ ಮಾಡಬಹುದು. ಹಸಿರು ಇರೋ ನಿಮ್ಮ ಶರ್ಟ್ ಕೆಂಪು ಮಾಡಬಹುದು ಎಂದು ತಿಳಿಸಿದ್ದಾರೆ.