ಬೆಂಗಳೂರು : ಎಲ್ಲಾ ನಿರುದ್ಯೋಗಿಗಳಿಗೂ ದುಡ್ಡು ಹಾಕಬೇಕು ಎಂದು ಮಾಜಿ ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಆಗ್ರಹಿಸಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವನಿಧಿಗೆ ಯಾವುದೇ ಕಂಡಿಷನ್ ಹಾಕಿರಲಿಲ್ಲ. ಇದೀಗ ಮಾತಿಗೆ ತಪ್ಪಿ 2023 ಬ್ಯಾಚ್ ಗೆ ಮಾತ್ರ ಅಂತಿದ್ದಾರೆ ಎಂದು ಕುಟುಕಿದರು.
ಉಚಿತ ಗ್ಯಾರಂಟಿ ಘೋಷಣೆ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಜಾರಿ ಮಾಡುತ್ತೇವೆ ಅಂದ್ರು. ಆದರೆ, ಕಾಂಗ್ರೆಸ್ ಇದೀಗ ಮಾತಿಗೆ ತಪ್ಪಿದೆ. ಗೃಹಲಕ್ಷ್ಮೀ ಯೋಜನೆ ಅಡಿ ಶೀಘ್ರವಾಗಿ ದುಡ್ಡು ಕೊಡಬೇಕು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ : ಬಜೆಪಿ ಕಾಲೆಳೆದ ಕಾಂಗ್ರೆಸ್
ಯಡಿಯೂರಪ್ಪ ನೇತ್ರತ್ವದಲ್ಲಿ ಧರಣಿ
ಸದನ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತ್ರತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಲಾಗುತ್ತದೆ. ಯಾವುದೇ ಕಂಡೀಷನ್ ಇಲ್ಲದೇ ಉಚಿತ ಭಾಗ್ಯಗಳನ್ನು ಕೊಡಲಿ ಎಂದು ಅಶ್ವತ್ಥನಾರಾಯಣ ಗುಡುಗಿದರು.
ಷರತ್ತು ಇಲ್ಲದೇ ಗೃಹಜ್ಯೋತಿ ಕೊಡ್ಬೇಕು
ನಾವು 10 ಕಿಲೋ ಅಕ್ಕಿ ಕೊಡ್ತಿವಿ ಅಂದಿದ್ರು. ಆದ್ರೆ, 5 ಕಿಲೋ ಮಾತ್ರ ಅಂದು, ಇದೀಗ ದುಡ್ಡು ಕೊಡ್ತೀವಿ ಅಂತಿದ್ದಾರೆ. ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಮಾಯವಾಗಿದೆ. ಸರಾಸರಿ ಯುನಿಟ್ ಲೆಕ್ಕಾಚಾರ ಹಾಕಿ ಕೊಡ್ತೀವಿ ಅಂತಿದ್ದಾರೆ. ಯಾವುದೇ ಕಂಡಿಷನ್ ಇಲ್ಲದೇ ಗೃಹಜ್ಯೋತಿ ಕೊಡಬೇಕು ಎಂದು ಒತ್ತಾಯಿಸಿದರು.