ಚಾಮರಾಜನಗರ : ಬಿಜೆಪಿ ಅವ್ರಿಗೆ ಮಾಡೋಕೆ ಇನ್ನೇನು ಕೆಲಸ ಇದೆ, ಏನಾದ್ರು ಒಂದು ಹೇಳ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಗರಂ ಆದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇಂದಿನಿಂದ ಉಚಿತ ವಿದ್ಯುತ್, ಅನ್ನಭಾಗ್ಯ ಅಕ್ಕಿ ಗ್ಯಾರಂಟಿ ಜಾರಿಯಾಗಿದೆ ಎಂದರು.
ಅಕ್ಕಿ ಬದಲು ದುಡ್ಡು ಕೊಡುವ ವಿಚಾರ ಕುರಿತು ಮಾತನಾಡಿದ ಅವರು, ನಾವು ಕೊಟ್ಟ ಭರವಸೆ ಜಾರಿ ಮಾಡುತ್ತಿದ್ದೇವೆ. ಅದಕ್ಕೆ ವಿರೋಧ ಮಾಡುವವರು ಮಾಡ್ತಾ ಇರ್ತಾರೆ, ಅಕ್ಕಿ ಸಂಗ್ರಹವಾದ ಮೇಲೆ ಅಕ್ಕಿಯನ್ನು ಕೊಡುತ್ತೇವೆ ಎಂದು ಹೇಳಿದರು.
2-3 ತಿಂಗಳ ಬಳಿಕ ಅಕ್ಕಿ ಕೊಡ್ತೀವಿ
ಅಕ್ಕಿ ಬದಲು ಹಣ ನೀಡುತ್ತಿರುವುದು ತಾತ್ಕಾಲಿಕ ವ್ಯವಸ್ಥೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಲು ಅಕ್ಕಿ ಸಿಗದ ಕಾರಣ ದುಡ್ಡು ಕೊಡುತ್ತಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ಕೊಡದ ಕಾರಣ ವಿಧಿ ಇಲ್ಲದೆ ಹಣ ಕೊಡುತ್ತಿದ್ದೇವೆ. ಎರಡ್ಮೂರು ತಿಂಗಳ ಬಳಿಕ ಅಕ್ಕಿ ಕೊಡ್ತೀವಿ ಎಂದು ತಿಳಿಸಿದರು.
ಇದನ್ನೂ ಓದಿ : ಅಕ್ಕಿ ಬದಲು ಹಣ ನೀಡುವ ಪ್ರಕ್ರಿಯೆಗೆ ಇದೇ ತಿಂಗಳು ಚಾಲನೆ : ಸತೀಶ್ ಜಾರಕಿಹೋಳಿ
ಪ್ರೊಟೆಸ್ಟ್ ಮಾಡ್ಬೇಡಿ ಅನ್ನೋಕೆ ಆಗುತ್ತಾ
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಭಟನೆ ವಿಚಾರವಾಗಿ ಮಾತನಾಡಿ, ಪ್ರತಿ ಪಕ್ಷದವರು ಹೇಳಿದಂಗೆ ಕೇಳೋಕೆ ಆಗಲ್ಲ. ಬಿಜೆಪಿ ಅವ್ರಿಗೆ ಇನ್ನೇನು ಕೆಲಸ ಇದೆ, ಏನಾದ್ರು ಹೇಳ್ತಾರೆ. ಪ್ರತಿಭಟನೆ ಮಾಡುವವರಿಗೆ ಬೇಡ ಅನ್ನೋಕೆ ಆಗುತ್ತಾ, ಮಾಡಲಿ ಬಿಡಿ. ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡುತ್ತ್ತಿದ್ದೇವೆ. ಬಿಜೆಪಿಯವರು ಏನು ಬೇಕಾದರೂ ಮಾಡಲಿ ಎಂದು ಕುಟುಕಿದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಇಂದಿನಿಂದ ಟೋಲ್ ಆರಂಭ ವಿಚಾರ ಮಾತನಾಡಿ, ಅದರ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಸಂಬಂಧಪಟ್ಟವರು ಮಾತನಾಡಿದ್ದಾರೆ ಎಂದು ಹೇಳಿದರು.