ಹಾವೇರಿ : ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ಬೇಧ ಭಾವ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ಕ್ಷೇತ್ರದ ಬಂಕಾಪುರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೋಡ್ ಶೋ ನಡೆಸಿದರು. ಈ ವೇಳೆ ಸಿಎಂ ಬೊಮ್ಮಾಯಿ ಸಮ್ಮುಖದಲ್ಲಿ ಅಲ್ಪಸಂಖ್ಯಾತ ಮುಖಂಡರು ಬಿಜೆಪಿ ಸೇರ್ಪಡೆಯಾದರು.
ಈ ವೇಳೆ ಮಾತನಾಡಿರುವ ಅವರು, ಶಿಗ್ಗಾಂವಿ ಕ್ಷೇತ್ರದ ದರ್ಗಾ, ಮಸೀದಿಗಳಿಗೆ ಸುಮಾರು 16 ಕೋಟಿ ರೂ. ಅನುದಾನ ನೀಡಿದ್ದೇನೆ. ಎಲ್ಲರೂ ಸೇರಿ ಬಂಕಾಪುರ ಅಭಿವೃದ್ಧಿ ಮಾಡೋಣ. ತಾವೆಲ್ಲಾ ಕ್ಷೇತ್ರದ ತುಂಬಾ ಪ್ರಚಾರ ಮಾಡಿ. ಬಿಜೆಪಿಗೆ ಸೇರ್ಪಡೆಯಾಗ್ತಿರೋ ಎಲ್ಲಾ ಮುಖಂಡರಿಗೆ ಅಭಿನಂದನೆ ತಿಳಿಸುವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಿಎಂ ಆಸೆ ಬಿಚ್ಚಿಟ್ಟ ಮತ್ತೊಬ್ಬ ಬಿಜೆಪಿ ನಾಯಕ
ಯಾವ ಭಾಗ್ಯವೂ ಜನರಿಗೆ ತಲುಪಿಲ್ಲ
ಕಾಂಗ್ರೆಸ್ನವರು ಆ ಭಾಗ್ಯ ಈ ಭಾಗ್ಯ ಅಂತಾ ಹೇಳಿದ್ದರು. ಆದರೆ, ಯಾವ ಭಾಗ್ಯನೂ ಜನರಿಗೆ ಮುಟ್ಟಲಿಲ್ಲ. ಜನರಿಗೆ ಇವರ ಮೇಲೆ ಭರವಸೆ ಇಲ್ಲ. ಅದಕ್ಕೆ ಇವರು ಗ್ಯಾರಂಟಿ ಕಾರ್ಡ್ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ ಟಕ್ಕರ್ ಕೊಟ್ಟಿದ್ದಾರೆ.
ಹತ್ತು ಕೆ.ಜಿ ಅಕ್ಕಿ ಕೊಡುತ್ತೇನೆ ಅಂತಾ ಕಾಂಗ್ರೆಸ್ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ ಅತ್ಯಧಿಕ ಹಣವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭರಿಸುತ್ತದೆ. ಹೀಗಿದ್ದರೂ ಅನ್ನ ಭಾಗ್ಯ ನಮ್ದು ಅಂತಾ ಜನರಿಗೆ ಸಿದ್ದರಾಮಯ್ಯ ಅವರು ಮೋಸ ಮಾಡುತ್ತಿದ್ದಾರೆ ಎಂದು ಕುಟುಕಿದ್ದಾರೆ.