ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಕೇವಲ ದಿನಾಂಕ ಮಾತ್ರ ಘೋಷಿಸಿದೆ. ಇನ್ನೂ ಮತದಾನ, ಫಲಿತಾಂಶ ಬಾಕಿಯಿದೆ. ಆದರೆ, ಇದಕ್ಕೂ ಬಿಜೆಪಿ ಪಾಳಯದಲ್ಲಿ ಮುಂದಿನ ಸಿಎಂ ಯಾರು? ಎಂಬ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
ಲಿಂಗಾಯತ ಸಿಎಂ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆ ನಡೆಯುತ್ತಿರುವ ಸಮಯದಲ್ಲೇ ಬಿಜೆಪಿಯ ಮತ್ತೊಬ್ಬ ನಾಯಕ ತಾವು ಮುಖ್ಯಮಂತ್ರಿ ಆಗುವ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ನನಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮೈಸೂರಿನಲ್ಲಿ ಹೇಳಿದ್ದಾರೆ.
ಸಿ.ಟಿ ರವಿ ಮುಂದಿನ ಸಿಎಂ ಎಂಬ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ನಾನು ಸಿಎಂ ಆಗಬೇಕು ಎಂದು ಕ್ಷೇತ್ರದಲ್ಲಿ ಮಾತ್ರ ಕೂಗು ಕೇಳಿಬರುತ್ತಿದೆ. ರಾಜ್ಯದೆಲ್ಲೆಡೆ ಈ ಕೂಗು ಕೇಳಿದಾಗ ಮುಖ್ಯಮಂತ್ರಿ ಮಾಡುವಂತೆ ನಾನು ಕೇಳುತ್ತೇನೆ ಎಂದು ತಿಳಿಸಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ಸಿ.ಟಿ ರವಿ ಅವರು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ.
ಇದನ್ನೂ ಓದಿ : ವರುಣಾದಿಂದ ಗೆದ್ದಾಗಲೇ ನಾನು ಸಿಎಂ ಆಗಿದ್ದು : ಸಿದ್ದರಾಮಯ್ಯ
ಇದು ರಾಜಕೀಯ ವ್ಯಭಿಚಾರನಾ?
ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ರಾಜಕೀಯ ವ್ಯಭಿಚಾರನಾ? ಇದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಹಳೆ ಬೇರು, ಹೊಸ ಚಿಗುರು ಮಾದರಿಯಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಬಡವರಿಂದ ಮೇಧಾವಿಗಳವರೆಗೂ ರಾಜಕೀಯದಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ನಮ್ಮ ಸರ್ಕಾರ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಸ್ಪಷ್ಟ ಬಹುಮತ ನೀಡಿ ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದು ಸಿ.ಟಿ ರವಿ ಮನವಿ ಮಾಡಿದ್ದಾರೆ.