ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಕರುನಾಡಿನಲ್ಲಿ ಮತಬೇಟೆ ನಡೆಸಲಿದ್ದಾರೆ. ಬೆಳಗ್ಗೆ 12 ಗಂಟೆಗೆ ಕೋಲಾರಕ್ಕೆ ಆಗಮಿಸುವ ರಾಹುಲ್ ಗಾಂಧಿ ಮೈತ್ರಿ ಅಭ್ಯರ್ಥಿ ಕೆ. ಹೆಚ್. ಮುನಿಯಪ್ಪ ಪರ ಪ್ರಚಾರ ನಡೆಸಲಿದ್ದಾರೆ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿದ್ದು, ಸಭೆಯಲ್ಲಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ಹಲವರು ಭಾಗಿಯಾಗಲಿದ್ದಾರೆ. ಮಧ್ಯಾಹ್ನ ಚಿತ್ರದುರ್ಗ ಹಾಗೂ ಸಂಜೆ ಕೆ.ಆರ್. ನಗರದಲ್ಲಿ ರಾಹುಲ್ ರ್ಯಾಲಿ ನಡೆಸಲಿದ್ದಾರೆ. ಒಕೆ.ಆರ್. ನಗರ ಸಮಾವೇಶದಲ್ಲಿ ದೇವೇಗೌಡ್ರು, ಹೆಚ್. ಡಿ. ಕುಮಾರಸ್ವಾಮಿ ಅವರೂ ಉಪಸ್ಥಿತರಿರಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಚಿತ್ರದುರ್ಗದಲ್ಲಿ ರಾಹುಲ್ ಗಾಂಧಿ ಕ್ಯಾಂಪೇನ್ ನಡೆಸಲಿದ್ದು, ಕೋಟೆ ನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷರ ಮತಬೇಟೆಗೆ ವೇದಿಕೆ ಸಜ್ಜಾಗಿದೆ. ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ದೋಸ್ತಿಗಳ ಶಕ್ತಿ ಪ್ರದರ್ಶನ ನಡೆಯಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಪರ ಮೈತ್ರಿ ನಾಯಕರು ಪ್ರಚಾರ ನಡೆಸಲಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಸಚಿವ ಡಿ.ಕೆ. ಶಿವಕುಮಾರ್ ಉಪಸ್ಥಿತರಿರಲಿದ್ದಾರೆ.
ಸಂಜೆ 5 ಗಂಟೆಗೆ ಕೆ.ಆರ್.ನಗರದಲ್ಲಿ ದೋಸ್ತಿ ಪಕ್ಷಗಳು ಶಕ್ತಿ ಪ್ರದರ್ಶಿಸಲಿದ್ದು, ಡಿಗ್ರಿ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮಾವೇಶ ನಡೆಯಲಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಪರ ರಾಹುಲ್ ಗಾಂಧಿ ಪ್ರಚಾರ ಮಾಡಲಿದ್ದಾರೆ. ಸಮಾವೇಶದಲ್ಲಿ ಹೆಚ್.ಡಿ.ದೇವೇಗೌಡ, ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರೂ ಭಾಗಿಯಾಗಲಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿರಲಿದ್ದಾರೆ.