ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ನಟ ದರ್ಶನ್, ತಮಗೆ ಮನೆ ಊಟ ಪಡೆಯಲು ಅನುಮತಿಸುವಂತೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮೇಲ್ವಿಚಾರಕರಿಗೆ ನಿರ್ದೇಶಿಸಬೇಕು ಎಂಬ ಅರ್ಜಿ ವಿಚಾರಣೆ ಜುಲೈ 19 ರಂದು ನಾಳೆ ನಡೆಯಲಿದೆ.
ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ಇಂದು ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ನಿಗದಿಯಾಗಿತ್ತು. ಪ್ರಕರಣದ ಸಂಖ್ಯೆ ಕೂಗಿದಾಗ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಮತ್ತು ಹೆಚ್ಚುವರಿ ಅಡ್ವಕೇಟ್ ಜನರಲ್ ವಿ.ಜಿ. ಭಾನುಪ್ರಕಾಶ್ ಅವರು ದರ್ಶನ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಪೀಠಕ್ಕೆ ಲಿಖಿತ ಆಕ್ಷೇಪಣೆ ಸಲ್ಲಿಸಿದರು. ಆಕ್ಷೇಪಣೆ ಸ್ವೀಕರಿಸಿದ ನ್ಯಾಯಪೀಠ ಶುಕ್ರವಾರ (ಜುಲೈ 19) ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು. ದರ್ಶನ್ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಹಾಜರಿದ್ದರು.
ಇದನ್ನೂ ಓದಿ: ರೈತನಿಗೆ ಅವಮಾನ: ಒಂದು ವಾರ GT Mall ಬಂದ್ಗೆ ಸಚಿವರು ಸೂಚನೆ
ಮನವಿ ಏನು?:
ಜೈಲಿನಲ್ಲಿ ನೀಡಲಾಗುತ್ತಿರುವ ಆಹಾರ ಜೀರ್ಣಿಸಿಕೊಳ್ಳಲು ನನಗೆ ಆಗುತ್ತಿಲ್ಲ. ಜೈಲಿನ ಊಟದಿಂದಾಗಿ ಅತಿಸಾರ ಉಂಟಾಗಿದ್ದು ಪದೇ ಪದೇ ಭೇದಿ ಆಗುತ್ತಿದೆ. ಪರಿಣಾಮ ದೇಹದ ತೂಕ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಆಹಾರ ತರಿಸಿಕೊಳ್ಳಲು ಜೈಲು ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದ್ದೆ. ಆದರೆ, ಅವರು ಇದಕ್ಕೆ ಒಪ್ಪಿಲ್ಲ ಎಂದು ದರ್ಶನ್ ಅರ್ಜಿಯಲ್ಲಿ ವಿವರಿಸಿದ್ದಾರೆ.