Saturday, September 28, 2024

ರೇಣುಕಾಸ್ವಾಮಿ ಕೊಲೆ: ದಾಸನಿಗೆ ‘139’ ಕಂಟಕ: ಶೆಡ್​​ ಕಾರ್ಮಿಕರ ಬಾಯಿ ಮುಚ್ಚಿಸಲು ಭಾರಿ ಆಮಿಷ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ಪೊಲೀಸರು ಇದುವರೆಗೂ ಸಾಕಷ್ಟು ಸಾಕ್ಷಿಗಳನ್ನ ಕಲೆ ಹಾಕಿದ್ದಾರೆ. ಆರೋಪಿಗಳು ಧರಿಸಿದ್ದ ಬಟ್ಟೆ, ಕೃತ್ಯಕ್ಕೆ ಬಳಸಿದ್ದ ಲಾಠಿ, ಮರದ ಪೀಸ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ತಂಗಿದ್ದ ಹೋಟೆಲ್ ಲೆಡ್ಜರ್ ಬುಕ್, ಶವ ಬಿಸಾಡಲು ಬಳಸಿದ್ದ ಕಾರುಗಳನ್ನು ಈಗಾಗಲೇ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಇನ್ನೂ ಪ್ರಕರಣ ಮುಚ್ಚಿ ಹಾಕಲು ಆರೋಪಿಗಳು ಪಡೆದುಕೊಂಡಿದ್ದ ಹಣ, ಆರೋಪಿಗಳ ಮೊಬೈಲ್ ಪೋನ್ & ಮೃತದೇಹದ ಮೇಲಿನ ಕಳುವಾಗಿದ್ದ ಚಿನ್ನಾಭರಣ ಸೇರಿ ಒಟ್ಟು 139 ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಇದುವರೆಗೂ 28 ಕಡೆ ಮಹಜರ್ ನಡೆಸಲಾಗಿದ್ದು, ದರ್ಶನ್ ಸೇರಿ ಎಲ್ಲ 17 ಆರೋಪಿಗಳ ನಿವಾಸ ಹಾಗೂ ಬೇರೆ 11 ಸ್ಥಳಗಳಲ್ಲೂ ಮಹಜರ್ ಪ್ರಕ್ರಿಯೆ ನಡೆಸಲಾಗಿದೆ.

ನಟ ದರ್ಶನ್‌ ಮನೆಯಲ್ಲಿ 37 ಲಕ್ಷ ರೂ. ಜಪ್ತಿ:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ನಟ ದರ್ಶನ್‌ ಸೇರಿ ನಾಲ್ವರು ಆರೋಪಿಗಳನ್ನು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯವು ಎರಡು ದಿನ ಪೊಲೀಸ್‌ ಕಸ್ಟಡಿಗೆ ವಹಿಸಿದೆ. ಇದರ ಬೆನ್ನಲ್ಲೇ, ನಟ ದರ್ಶನ್‌ ಮನೆಯಲ್ಲಿ ಪೊಲೀಸರು 37.40 ಲಕ್ಷ ರೂ. ಜಪ್ತಿ ಮಾಡಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಪೊಲೀಸರೇ ನ್ಯಾಯಾಲಯಕ್ಕೆ ಸಲ್ಲಿಸಿದ ರಿಮ್ಯಾಂಡ್‌ ಅರ್ಜಿಯಲ್ಲಿ ಹಣ ವಶಪಡಿಸಿಕೊಂಡಿರುವ ಕುರಿತು ಮಾಹಿತಿ ನೀಡಿದ್ದಾರೆ. “ಜೂನ್‌ 19ರಂದು ಎ2 ಆರೋಪಿಯ ಮನೆಯಿಂದ 37.40 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ, ಆರೋಪಿಯು ತನ್ನ ಹೆಂಡತಿಗೆ ನೀಡಿದ್ದ 3 ಲಕ್ಷ ರೂಪಾಯಿಯನ್ನೂ ವಶಪಡಿಸಿಕೊಳ್ಳಲಾಗಿದೆ. ಹಾಗಾಗಿ, ವಶಪಡಿಸಿಕೊಂಡಿರುವ ಹಣದ ಮೂಲದ ಬಗ್ಗೆ ಆರೋಪಿಯಿಂದ ಮಾಹಿತಿ ಪಡೆದು, ತನಿಖೆ ಮಾಡಬೇಕಿದೆ” ಎಂಬುದಾಗಿ ಪೊಲೀಸರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಪೊಲೀಸ್​ ಪೇದೆ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದರ್ಶನ್​ ಗ್ಯಾಂಗ್​ ಹಲ್ಲೆ

ಕೇಸ್‌ ಮುಚ್ಚಿ ಹಾಕಲು ಹೊಂದಿಸಿದ್ದ 40 ಲಕ್ಷ ರೂ. ಸೀಜ್‌!:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಚಾವಾಗಲು ದರ್ಶನ್‌ ಜಮಾಯಿಸಿ ಇಟ್ಟುಕೊಂಡಿದ್ದ 40 ಲಕ್ಷ ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ನೇಹಿತ ಮೋಹನ್‌ರಾಜ್‌ ಎಂಬುವವರಿಂದ ಈ ಹಣ ಪಡೆದು ದರ್ಶನ್‌, ಐಡಿಯಲ್‌ ಹೋಮ್ಸ್‌ನ ಮನೆಯಲ್ಲಿಇಟ್ಟಿದ್ದರು. ಇದರ ಮಾಹಿತಿ ಅರಿತ ತನಿಖಾಧಿಕಾರಿಗಳು ಜೂ.19ರಂದು ದಾಳಿ ನಡೆಸಿ 37.40. ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ತಮ್ಮ ಮೇಕಪ್‌ ಮ್ಯಾನ್‌ ಮುಖಾಂತರ ಪತ್ನಿ ವಿಜಯಲಕ್ಷ್ಮೀ ಅವರಿಗೆ ಮೂರು ಲಕ್ಷ ರೂ. ನಗದು ಹಾಗೂ ಇತರ ವಸ್ತುಗಳನ್ನು ಕೊಟ್ಟು ಕಳುಹಿಸಿದ್ದರು. ಈ ಹಣವನ್ನು ವಿಜಯಲಕ್ಷ್ಮೀ ಅವರ ಬಳಿಯಿಂದ ವಶಪಡಿಸಿಕೊಳ್ಳಲಾಗಿದೆ. ಜತೆಗೆ, ಈ ಹಿಂದೆ ಪ್ರದೋಶ್‌ಗೆ ನೀಡಲಾಗಿದ್ದ 30 ಲಕ್ಷ ರೂ. ಜಪ್ತಿ ಮಾಡಲಾಗಿತ್ತು. ಈ ಹಣದ ಮೂಲದ ಬಗ್ಗೆ ತನಿಖೆ ನಡೆಸಬೇಕಿದೆ.

ಶೆಡ್​​ ಕಾರ್ಮಿಕರ ಬಾಯಿ ಮುಚ್ಚಿಸಲು ಭಾರಿ ಆಮಿಷ:

ಕೊಲೆ ಪ್ರಕರಣದಿಂದ ಬಚಾವ್ ಆಗಲು ದರ್ಶನ್ ತಮ್ಮ ಮನೆಯಲ್ಲಿ 40 ಲಕ್ಷ ರೂ. ಸಂಗ್ರಹಿಸಿ ಇಟ್ಟಿದ್ದ ವಿಷಯವೂ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಶೆಡ್​​ ಕಾರ್ಮಿಕರ ಬಾಯಿ ಮುಚ್ಚಿಸಲು ಭಾರಿ ಆಮಿಷ ಒಡ್ಡಲಾಗಿದೆ ಎಂದು ತಿಳಿದು ಬಂದಿದೆ. ಕೊಲೆ ಪ್ರಕರಣ ಸಂಬಂಧ ಎರಡನೇ ಬಾರಿಗೆ ಪೊಲೀಸ್ ಕಸ್ಟಡಿಗೆ ಪಡೆದು ದರ್ಶನ್ ಅವರನ್ನು ವಿಚಾರಣೆಗೊಳಪಡಿಸಿದಾಗ 40 ಲಕ್ಷ ರು. ಹಣದ ಬಗ್ಗೆ ಬಾಯಿಟ್ಟಿದ್ದಾರೆ. ಆನಂತರ ಆರ್.ಆರ್.ನಗರದ ಐಡಿಯಲ್ ಹೋಮ್ ಲೇಔಟ್‌ನಲ್ಲಿರುವ ದರ್ಶನ್ ಮನೆಯಲ್ಲಿ ಬ್ಯಾಗ್‌ನಲ್ಲಿದ್ದ 37.40 ಲಕ ರು. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಉಳಿದ ಹಣವನ್ನು ಆರ್.ಆರ್.ನಗರದ ಲ್ಲಿರುವ ಅವರ ಮನೆ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ಅವರ ಬಳಿಯಿಂದ ಜಪ್ತಿ ಮಾಡಲಾಗಿದೆ.

RELATED ARTICLES

Related Articles

TRENDING ARTICLES