Tuesday, May 21, 2024

ಸಿದ್ದರಾಮಯ್ಯ ಮಗನ ಸಾವಿನ ದಿನ ಏನೇನಾಯಿತು ಎಲ್ಲವು ಹೊರಬರಲಿದೆ: ಸಿಎಂಗೆ ಕುಮಾರಸ್ವಾಮಿ ಎಚ್ಚರಿಕೆ

ಹುಬ್ಬಳ್ಳಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ  ಅವರ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಜೆಡಿಎಸ್​ ಕೋರ್​ ಕಮಿಟಿ ಸದಸ್ಯರ ಸಭೆಯ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬದಲ್ಲಿ ನಡೆದಿದ್ದ ಘಟನೆಗೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವ ರೀತಿ ಸಹಾಯ ಮಾಡಿದ್ದಾರೆ ಎಂಬುದನ್ನು ಮರೆತಿದ್ದೀರಿ. ಎಲ್ಲ ದಾಖಲೆಗಳನ್ನು ನಾವು ಹೊರಗಡೆ ತರುತ್ತೇವೆ. ನಿಮ್ಮ ಕುಟುಂಬದಲ್ಲಿ ನಡೆದ ಘಟನೆ ಏನೇನಾಯಿತು ಎಲ್ಲವೂ ಹೊರಗೆ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಪೆನ್​ ಡ್ರೈವ್​ ಬಿಡೋ ಚಿಲ್ಲರೆ ಕೆಲಸ ನಾನು ಮಾಡಲ್ಲ, ಚುನಾವಣೆ ಎದುರಿಸುತ್ತೇನೆ: ಡಿಕೆ ಶಿವಕುಮಾರ್​

ನಮ್ಮ ಮನೆಯ ಎದುರು ಏಕೆ ಪ್ರತಿಭಟನೆ ಮಾಡುತ್ತೀರಿ. ಇದನ್ನು ಇಷ್ಟಕ್ಕೆ ಬಿಡಲ್ಲ. ಎಲ್ಲ ವಿಷಯವೂ ತನಿಖೆಯಾಗಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ‌ಎಚ್‌.ಡಿ. ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್‌ನವರು ನಮ್ಮ ಮನೆ ಬಳಿ ಬಂದು ಪ್ರತಿಭಟಿಸುತ್ತಿದ್ದಾರೆ. ಮಹಾನುಭಾವನ  ಡಿಸಿಎಂ ಡಿ.ಕೆ. ಶಿವಕುಮಾರ್‌ ಮನೆ ಬಳಿ ಹೋಗಿ ಪ್ರತಿಭಟನೆ ಮಾಡಿ.

ಎಚ್‌.ಡಿ. ರೇವಣ್ಣ ಕುಟುಂಬದ ವಿಷಯ ಕೆದಕಿದರೆ ನಾನು ಚರ್ಚೆ ಮಾಡಲು ಸಿದ್ಧ. ಪಲಾಯಾನ ಮಾಡುವುದಿಲ್ಲ. ಕಾಂಗ್ರೆಸ್‌ ನಾಯಕ ಮಹಾಪರಾಧ ಮಾಡಿದ್ದಾನೆ. ಎಷ್ಟು ತಿಂಗಳ ಹಿಂದೆ ಆ ಮಹಾನ್‌ ನಾಯಕನಿಗೆ ಗೊತ್ತಿತ್ತು. ಪೆನ್‌ಡ್ರೈವ್‌ ಯಾರು ಸರಬರಾಜು ಮಾಡಿದರು ಎಲ್ಲವೂ ಗೊತ್ತಿದೆ. ಈ ಮಹಾನ್‌ ನಾಯಕನ ನಡವಳಿಕೆಯ ಬಗ್ಗೆಯೂ ಚರ್ಚಿಸೋಣ. ನಿನ್ನೆ ಹಾಸನ ಜಿಲ್ಲಾಧಿಕಾರಿ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಸರ್ಕಾರದ ಹುನ್ನಾರ ಅಡಗಿದೆ ಎಂದು ಕಿಡಿಕಾರಿದರು.

RELATED ARTICLES

Related Articles

TRENDING ARTICLES