ಬೆಂಗಳೂರು : ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ವೀಕ್ಷಿಸಲು ಅನುಕೂಲವಾಗುವಂತೆ ಜನವರಿ 22ರಂದು ರಾಜ್ಯ ಕಾಂಗ್ರೆಸ್ ಸರ್ಕಾರ ರಜೆ ಘೋಷಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದ್ದಾರೆ.
ಕೋಟ್ಯಂತರ ಭಾರತೀಯರ ದಶಕಗಳ ಕಾಲದ ಕನಸು ಜನವರಿ 22 ರಂದು ನನಸಾಗುತ್ತಿದೆ. ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರರು ವಿರಾಜಮಾನವಾಗಲಿದ್ದಾರೆ. ಇತಿಹಾಸದ ಪುಟದಲ್ಲಿ ದಾಖಲಾಗುವ ಈ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಕಾಂಗ್ರೆಸ್ ಸರ್ಕಾರ ರಾಜ್ಯದೆಲ್ಲೆಡೆ ರಜೆ ಘೋಷಿಸಬೇಕು ಎಂದು ಹೇಳಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಗೊಂದಲದಲ್ಲಿದೆ. ದೇಶದಲ್ಲಿ ರಾಮ ಜಪ ನಡೆಯುತ್ತಿದ್ದರೆ ಕಾಂಗ್ರೆಸ್ ಈ ವಾತಾವರಣವನ್ನು ಕಲುಷಿತಗೊಳಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆ ಆಹ್ವಾನವನ್ನು ಕಾಂಗ್ರೆಸ್ ಪಕ್ಷ ತಿರಸ್ಕರಿಸುವ ಮೂಲಕ ಅಸಂಖ್ಯಾತ ರಾಮಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಬಿ.ವೈ. ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಸೆಲ್ಫಿ ವಿಥ್ ನನ್ನ ರಾಮ’ ಕಾರ್ಯಕ್ರಮಕ್ಕೆ ಚಾಲನೆ
ಬೆಂಗಳೂರಿನಲ್ಲಿ ‘ಸೆಲ್ಫಿ ವಿಥ್ ನನ್ನ ರಾಮ’ ಕಾರ್ಯಕ್ರಮಕ್ಕೆ ಬಿ.ವೈ. ವಿಜಯೇಂದ್ರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗ ಪ್ರೀತಂ ಗೌಡ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯ ಜಗದೀಶ್ ಹಿರೇಮನಿ ಮತ್ತು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.