ಬಳ್ಳಾರಿ : ಯಾವುದೇ ಕಾರಣಕ್ಕೂ ಹೆಚ್ಚುವರಿ ಡಿಸಿಎಂ ಬೇಡ ಒಬ್ಬರೇ ಇರಲಿ. ಪಕ್ಷದ ತೀರ್ಮಾನ ಒಂದೇ ಸಿಎಂ, ಒಂದೇ ಡಿಸಿಎಂ ಇದೆ. ಈ ಟ್ರೈಲ್ ರನ್ ಸಕ್ಸಸ್ ಆಗಿದೆ ಎಂದು ಡಿ.ಕೆ ಶಿವಕುಮಾರ್ ಪರ ಸಚಿವ ನಾಗೇಂದ್ರ ಬ್ಯಾಟ್ ಬೀಸಿದರು.
ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿಕೆಶಿ ಅವರದ್ದು ಒಳ್ಳೆಯ ಕಾಂಬಿನೇಷನ್ ಇದೆ. ಸಚಿವ ಕೆ.ಎನ್ ರಾಜಣ್ಣ, ಶಾಸಕ ಬಸವರಾಜ ರಾಯರೆಡ್ಡಿ ಯಾರಾದ್ರೂ ಕೇಳಬಹುದು. ಡಿಸಿಎಂ ಸ್ಥಾನ ಹೈಕಮಾಂಡ್ಗೆ ಬಿಟ್ಟ ವಿಚಾರ. ನ್ನನ್ನ ನಿಲುವು ಮಾತ್ರ ಒಂದೇ, ಒಬ್ಬರೇ ಡಿಸಿಎಂ ಸಾಕು ಎಂದರು.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿ, ಈ ಮೊದಲೇ ನಾವು ಹೇಳಿದ್ವಿ. ಜೆಡಿಎಸ್ ಬಿಜೆಪಿಯ ‘ಬಿ’ ಟೀಂ ಎಂದಿದ್ವಿ, ಇದೀಗ ಅದು ಕನ್ಪರ್ಮ್ ಆಗಿದೆ. ಇವರಿಬ್ಬರ ಮೈತ್ರಿ ಉತ್ತರ ಕರ್ನಾಟಕದಲ್ಲಿ ಯಾವುದೇ ಪರಿಣಾಮ ಬಿರೋದಿಲ್ಲ. ಮೂರು ಅಥವಾ ನಾಲ್ಕು ಸ್ಥಾನದಲ್ಲಿ ಪರಿಣಾಮ ಬೀರಬಹುದು. ಎರಡು ಪಕ್ಷವನ್ನು ಮೆಟ್ಟಿನಿಂತು ರಾಜ್ಯದಲ್ಲಿ ಅತೀ ಹೆಚ್ಚು ಲೋಕಸಭಾ ಸ್ಥಾನ ಗೆಲ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾರೇ ಪಕ್ಷಕ್ಕೆ ಬಂದರೂ ಸ್ವಾಗತ
ಜಾತ್ಯಾತೀತ ಪಕ್ಷ ಅಂತ ಯಾರು ಯಾರು ಸೇರಿದ್ರೂ ಅವರು ಎಲ್ಲಾರಿಗೂ ಗೊತ್ತಾಗಿದೆ ಈಗ. ಕೋಮುವಾದಿ ಪಕ್ಷದ ಜೊತೆಗೆ ಹೋದಾಗ ಇವರ ಜೆಡಿಎಸ್ ನಿಲುವು ಜನರಿಗೆ ಗೊತ್ತಾಗಿದೆ. ಸಿಎಂ ಇಬ್ರಾಹಿಂ ಪಕ್ಷ ಬಿಡೋ ವಿಚಾರ ಅವರ ಸಾಮಾಜಿಕ ಕಳಕಳಿ ಮತ್ತು ನಿಲುವು ಎತ್ತಿ ತೋರಿಸುತ್ತದೆ. ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಇಬ್ರಾಹಿಂ ಸೇರಿದಂತೆ ಯಾರೇ ಬಂದ್ರು ಸ್ವಾಗತ. ಈ ಬಗ್ಗೆ ಡಿಕೆಶಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಹೇಳಿದರು.
ಶಾಸಕ, ಸಚಿವರನ್ನು ಯಾಕೆ ನಿಲ್ಲಿಸಬೇಕು?
ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಚಿವ ಶಾಸಕರನ್ನು ಕಣಕ್ಕಿಳಿಸೋ ವಿಚಾರವಾಗಿ ಮಾತನಾಡಿ, ಪಕ್ಷದ ನಿರ್ಧಾರಕ್ಕೆ ಎಲ್ಲಾರೂ ಬದ್ದ. ಆದರೆ, ಇರೋ ಶಾಸಕ, ಸಚಿವರನ್ನು ಯಾಕೆ ನಿಲ್ಲಿಸಬೇಕು? ಕಾಂಗ್ರೆಸ್ನಲ್ಲಿ ಸಾಕಷ್ಟು ಕಾರ್ಯಕರ್ತರಿದ್ದಾರೆ, ಎಲ್ಲರೂ ಶಕ್ತಿವಂತರಾಗಿದ್ದಾರೆ. ಅವಕಾಶ ವಂಚಿತರಿಗೆ ಟಿಕೆಟ್ ನೀಡಲು ಪಕ್ಷ ಯೋಚನೆ ಮಾಡ್ತಿದೆ. ಸಿಎಂ ಸೇರಿದಂತೆ 34 ಸಚಿವರು ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇವೆ. ಆದರೆ, ಉಪಚುನಾವಣೆ ಮಾಡಲು ಕಾಂಗ್ರೆಸ್ಗೆ ಇಷ್ಟವಿಲ್ಲ, ಜನರ ಮೇಲೆ ಹೊರೆ ಹಾಕೋದಿಲ್ಲ ಎಂದರು.