ಹುಬ್ಬಳ್ಳಿ : ಈಗ ಖಾಸಗಿ ಬಸ್ ಮಾಲೀಕರ ವಿಶ್ವಾಸ ಕಳೆದುಕೊಂಡಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತು ಖಾಸಗಿ ಬಸ್ ಮಾಲೀಕರ ಬೇಡಿಕೆ ಈಡೇರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.
ಬೆಂಗಳೂರು ಬಂದ್ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಬಸ್ ಮಾಲೀಕರ ಸಮಸ್ಯೆ ಬಗೆಹರಿಸ್ತೀವಿ ಅಂತ ಹೇಳ್ತಾನೇ ಬಂದ್ರು. ಸುಮ್ಮನೆ ಮೀಟಿಂಗ್ ಮಾಡಿದರು ಎಂದು ಕುಟುಕಿದರು.
ರಾಜ್ಯ ಸರ್ಕಾರಕ್ಕೆ ಜನರಿಗೆ ಸಹಾಯ ಮಾಡಬೇಕೆಂಬ ಮನಸಿಲ್ಲ. ನ್ಯಾಷನಲ್ ಡಿಸಾಸ್ಟರ್ ನ ಮೊದಲನೇ ಕಂತು ಈಗಾಗಲೇ ಬಂದಿದೆ. ಇವರಿಗೆ ರೈತರ ಸಂಕಷ್ಟ ಪರಿಹಾರ ಮಾಡೋ ಮನಸ್ಸಿಲ್ಲ. ರಾಜ್ಯ ಸರ್ಕಾರ ತನ್ನ ಅಧಿಕಾರ ಬಳಸಿ ಕೂಡಲೇ ಬರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಿಎಂ ಆಗಿದ್ದಾಗ ಬರ ಘೋಷಣೆ ಮಾಡಲಿಲ್ಲವೇ?
ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾನದಂಡಗಳ ಅಡ್ಡಿ ವಿಚಾರವಾಗಿ ಮಾತನಾಡಿ, ಇದೆಲ್ಲವೂ ಕುಂಟು ನೆಪ. ಈ ಹಿಂದೆಯೂ ಇದೇ ನಿಯಮಗಳಿದ್ದವು. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬರ ಘೋಷಣೆ ಮಾಡಲಿಲ್ಲವೇ? ನಾವು ಸಹ ಕೇಂದ್ರ ಸರ್ಕಾರ ಕೊಡುವುದಕ್ಕಿಂತ ಹೆಚ್ಚಿನ ದುಡ್ಡನ್ನು ಕೊಟ್ಟೆವು. ನಿಯಮ ಬದಲಾವಣೆಗಾಗಿ ನಾವು ಕಾದುಕೊಂಡು ಕೂತೆವೇ? ಬರ ಪರಿಹಾರದ ಎರಡು ಪಟ್ಟು ಮೊತ್ತ ಕೊಟ್ಟೆವು ಎಂದು ಚಾಟಿ ಬೀಸಿದರು.
ಹಾವೇರಿಯ ಹೊಸರಿತ್ತಿ ಲಾಕಪ್ ಡೆತ್ ವಿಚಾರ ಕುರಿತು ಮಾತನಾಡಿ, ಈ ಬಗ್ಗೆ ಮಾಹಿತಿ ತೆಗೆದುಕೊಳ್ಳುತ್ತೇನೆ. ಅಕಸ್ಮಾತ್ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರೆ ಖಂಡಿತ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ ಎಂದು ಹೇಳಿದರು.