ಹುಬ್ಬಳ್ಳಿ : ‘ಕಾಂಗ್ರೆಸ್ ಸರ್ಕಾರದಿಂದ ದುರಾಡಳಿತ ಹೆಚ್ಚಾಗಿದೆ. ಒಂದು ಕಡೆ ಅಭಿವೃದ್ಧಿ ಸಂಪೂರ್ಣ ಸ್ಥಗಿತ, ಮತ್ತೊಂದು ಕಡೆ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಒಂದು ಹಿಡಿ ಮಣ್ಣನ್ನು ರಸ್ತೆಗೆ ಹಾಕಲಾರದ ಸ್ಥಿತಿ ನಿರ್ಮಾಣವಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹರಿಹಾಯ್ದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿ ಆದರೆ ಇಡೀ ರಾಜ್ಯ ಅಧೋಗತಿ ಹೋಗುತ್ತೆ. ಇದನ್ನು ನಿಲ್ಲಿಸುವ ಉದ್ದೇಶದಿಂದ ನಾವಂತೂ ಹೋರಾಟ ಮಾಡುತ್ತಿದ್ದೇವೆ. ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುವುದು ವಿರೋಧ ಪಕ್ಷದ ಜವಾಬ್ದಾರಿ ಇದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮೈತ್ರಿ ಏರ್ಪಟ್ಟಿದೆ. ರಾಜಕಾರಣ ನಿಂತ ನೀರಲ್ಲ, ಕೆಲವು ಉದ್ದೇಶಕ್ಕಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ವಿರೋಧ ಪಕ್ಷಗಳು ಒಟ್ಟಿಗೆ ಹೋರಾಟ ಮಾಡಬೇಕು ಎನ್ನುವುದು ರಾಜ್ಯದ ಜನರ ಅಪೇಕ್ಷೆ. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹತ್ತಿರ ಬರ್ತಾ ಇವೆ ಎಂದು ಮೈತ್ರಿ ಸರ್ಮರ್ಥನೆ ಮಾಡಿಕೊಂಡರು.
ಆಗ ಕಾಂಗ್ರೆಸ್ಸಿಗರು ಅಸಹಾಯಕರಿದ್ದರೇ?
ಇಬ್ಬರು ಅಸಹಾಯಕರು ಸೇರಿ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಶೆಟ್ಟರ್ ಹೇಳಿಕೆಗೆ, ಹಿಂದೆ ಕಾಂಗ್ರೆಸ್ ನವರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಲ್ಲವೇ?ಆಗ ಇಬ್ಬರೂ ಅಸಹಾಯಕರಿದ್ದರೇ? ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಕುರಿತು ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಜೆಡಿಎಸ್ಗೆ ಎಷ್ಟು ಸ್ಥಾನ ಕೊಡಬೇಕು ಅನ್ನೋದನ್ನ ವಸ್ತು ಸ್ಥಿತಿ ಆಧಾರದ ಮೇಲೆ ಹೈಕಮಾಂಡ್ ನಿರ್ಧರಿಸುತ್ತೆ ಎಂದು ಮಾಹಿತಿ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಡಿಯೋ ವಿಚಾರದ ಕುರಿತ ಎಂ.ಪಿ ರೇಣುಕಾಚಾರ್ಯ ಹೇಳಿಕೆಗೆ ಈ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.