ಮಂಗಳೂರು : ಹಿಂದೂ ಧರ್ಮದ ಹುಟ್ಟು ಗೊತ್ತಿಲ್ಲದ ಪರಮೇಶ್ವರ್ ಹೆಸರನ್ನು ಇಸ್ಮಾಯಿಲ್ ಅಂತ ಯಾಕೆ ಇಟ್ಟಿಲ್ಲ? ಸ್ಟಾಲಿನ್ ಅಂತ ಅವರಿಗೆ ಹೆಸರು ಇಡಬಹುದಿತ್ತಲ್ವಾ? ಎಂದು ಆರ್.ಎಸ್.ಎಸ್ ಹಿರಿಯ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದರು.
ಹಿಂದೂ ಧರ್ಮದ ಹುಟ್ಟಿನ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರಶ್ನೆ ಮಾಡಿರುವ ವಿಚಾರವಾಗಿ ಪುತ್ತೂರಿನಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಇದೊಂದು ಹುಚ್ಚು ಶುರುವಾಗಿದೆ. ಸನಾತನ ಧರ್ಮದ ಬಗ್ಗೆ ದೂಷಣೆ ಮಾಡಿದರೆ ಅಲ್ಪಸಂಖ್ಯಾತರ ವೋಟು ಸಿಗುತ್ತೆ. ಅಧಿಕಾರ ಸಿಗುತ್ತೆ ಅನ್ನೋ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ಕುಟುಕಿದರು.
ಇದ್ದ ದೇವಸ್ಥಾನಕ್ಕೆಲ್ಲಾ ಭೇಟಿ ನೀಡುವ ಪರಮೇಶ್ವರ್ ಹೊರಗೆ ಬಂದ ಬಳಿಕ ಈ ರೀತಿ ಹೇಳಿಕೆ ನೀಡುತ್ತಾರೆ. ಸನಾತನ ಧರ್ಮದ ಹುಟ್ಟು ಯಾರಿಗೂ ತಿಳಿದಿಲ್ಲ. ಸನಾತನ ಧರ್ಮಕ್ಕೆ ಹುಟ್ಟೂ ಇಲ್ಲ, ನಾಶವೂ ಇಲ್ಲ. ಕ್ರಿಶ್ಚಿಯನ್, ಇಸ್ಲಾಂ ಇತ್ತೀಚೆಗೆ ಹುಟ್ಟಿಕೊಂಡಿರುವ ಮತಗಳು, ಧರ್ಮ ಅಲ್ಲ. ಸನಾತನ ಧರ್ಮ ನಿತ್ಯ ನೂತನ, ಎಲ್ಲ ಕಾಲಕ್ಕೂ, ಎಲ್ಲವನ್ನೂ ಒಪ್ಪಿಕೊಳ್ಳುವ ಧರ್ಮ. ಕಾಲಕ್ಕೆ ತಕ್ಕಂತೆ ತನ್ನಲ್ಲಿ ಬದಲಾವಣೆ ಮಾಡಿಕೊಳ್ಳುವ ಅವಕಾಶವಿರುವ ಧರ್ಮ ಎಂದು ಹೇಳಿದರು.
ಚರ್ಚುಗಳಿಗೆ ಜನರೇ ಬರುತ್ತಿಲ್ಲ
ಹಿಂದೆ ಇದ್ದ ಬಾಲ್ಯ ವಿವಾಹ, ವರದಕ್ಷಿಣೆ ಮೊದಲಾದ ಪಿಡುಗನ್ನು ತೆಗೆದು ಹಾಕಲಾಗಿದೆ. ಮೂಢನಂಬಿಕೆಯನ್ನು ತೊಡೆದು ಹಾಕುವ ಕೆಲಸವನ್ನು ಮಹಾಪುರುಷರು ಮಾಡಿದ್ದಾರೆ. ಈ ರೀತಿಯ ಬದಲಾವಣೆಗಳನ್ನು ನಾವು ಮಾಡಿಕೊಂಡೇ ಬಂದಿದ್ದೇವೆ. ಆದರೆ, ಇಸ್ಲಾಂ ಮತ್ತು ಕ್ರಿಶ್ಚಿಯನ್ ಮತದಲ್ಲಿ ಇಂತಹ ಅವಕಾಶವಿಲ್ಲ. ಆ ಕಾರಣಕ್ಕಾಗಿಯೇ ಆ ಮತದ ಜನರೇ ತಮ್ಮ ಮತವನ್ನು ಒಪ್ಪಿಕೊಳ್ಳುತ್ತಿಲ್ಲ. ಅಮೇರಿಕಾ ಮತ್ತು ಬ್ರಿಟನ್ ನಲ್ಲಿ ಚರ್ಚುಗಳಿಗೆ ಜನರೇ ಬರುತ್ತಿಲ್ಲ. ಅಮೆರಿಕದಲ್ಲಿ ಚರ್ಚುಗಳನ್ನು ಹರಾಜಿಗೆ ಇಡುವಂತಹ ಸ್ಥಿತಿ ಬಂದಿದೆ ಎಂದು ಕುಟುಕಿದರು.