ಬೆಂಗಳೂರು : ನಾಳೆ ಅಧಿಕೃತವಾಗಿ ಪ್ರಧಾನಿ ಮೋದಿ ರೋಡ್ ಶೋ ಇರಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ನಾಳೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮನ ವಿಚಾರವಾಗಿ ಅಧಿಕೃತವಾಗಿ ಮೋದಿ ರೋಡ್ ಶೋ ಇರಲ್ಲ. ಕೆಲ ಸ್ಥಳಗಳಲ್ಲಿ ಜನರು ಜಮಾಯಿಸುವ ಸಾಧ್ಯತೆ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಾರೆ. ಇಸ್ರೋ ಕೇಂದ್ರದಲ್ಲಿ ವಿಜ್ಞಾನಿಗಳನ್ನು ಪ್ರಧಾನಿ ಅಭಿನಂದಿಸಲಿದ್ದಾರೆ. ಹೆಚ್‌ಎಎಲ್‌ನಿಂದ ಪೀಣ್ಯದ ಇಸ್ರೋ ಕೇಂದ್ರದವರೆಗೂ ಸೂಕ್ತ ಭದ್ರತೆ ಒದಗಿಸಲಾಗಿದೆ ಎಂದು ದಯಾನಂದ್ ಮಾಹಿತಿ ನೀಡಿದ್ದಾರೆ.
ಭಾರಿ ವಾಹನಗಳಿಗೆ ಪ್ರವೇಶವಿಲ್ಲ
ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಮಾತನಾಡಿ, ನಾಳೆ ಬೆಳಗ್ಗೆ ಪ್ರಧಾನಿ ಆಗಮಿಸುವುದರಿಂದ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಹಳೆ ಮದ್ರಾಸ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರೋಡ್, ಸಿ.ವಿ ರಾಮನ್ ರಸ್ತೆ, ಯಶವಂತಪುರ ರಸ್ತೆ, ಗೋರಗುಂಟೆಪಾಳ್ಯ, ಜಾಲಹಳ್ಳಿ ಮಾರ್ಗದ ರಸ್ತೆಗಳನ್ನ ಹೊರತು ಪಡಿಸಿ ಪರ್ಯಾ ರಸ್ತೆ ಮನವಿ ಮಾಡಿಕೊಳ್ಳಲಾಗುತ್ತೆ. ನಾಳೆ ಬೆಳಗ್ಗೆ 4 ಗಂಟೆಯ ನಂತರ ನಗರಕ್ಕೆ ಭಾರಿ ವಾಹನಗಳಿಗೆ ಪ್ರವೇಶವಿಲ್ಲ. ಬೆಳಗ್ಗೆ 10 ಗಂಟೆಯವರೆಗೆ ಭಾರಿ ವಾಹನಗಳಿಗೆ ಪ್ರವೇಶವಿಲ್ಲ. ಬಳಿಕ ಪ್ರವೇಶ ನೀಡಲಾಗುವುದು ಎಂದು ಹೇಳಿದ್ದಾರೆ.