ಬೆಂಗಳೂರು : ಅವರಲ್ಲೇ ಇರುವ ಸುಮಾರು 30ಕ್ಕೂ ಹೆಚ್ಚು ಮಂದಿ ಅವ್ರ ಪಕ್ಷ ಬಿಟ್ಟು ಹೋಗುವ ಪರಿಸ್ಥಿತಿ ಇದೆ. ಫಸ್ಟ್ ಅವ್ರನ್ನು ಇರಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಹಲವು ಶಾಸಕರನ್ನು ಘರ್ ವಾಪಸಿ ಅಂತ ಕರೆದುಕೊಳ್ತಾ ಇದಾರೆ. ಅದರ ಜೊತೆ ಜೆಡಿಎಸ್ ಶಾಸಕರು ನಮ್ಮ ಸಂಪರ್ಕ ದಲ್ಲಿ ಇದಾರೆ ಅಂತ ಸುದ್ದಿ ಹಬ್ಬಿಸ್ತಾ ಇದಾರೆ. ಅವರಿಗೆ ಇದರ ಅವಶ್ಯಕತೆ ಏನಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ನಿನ್ನೆ ಯಾವುದೋ ನನ್ನ ಹಳೆ ಟ್ವೀಟ್ ಬಗ್ಗೆ ಮಾತಾಡಿದ್ದಾರೆ. ಕರ್ನಾಟಕ ತಮಿಳುನಾಡಿನ ಜನ ಸೋದರರಂತೆ ಬಗೆಹರಿಸಿಕೊಳ್ಳಬೇಕು ಅಂತ ಹೇಳಿದ್ದ ಬಗ್ಗೆ ಮಾತಾಡಿದ್ದಾರೆ. ನ್ಯಾಯಾಲಯದಲ್ಲಿ ಇದನ್ನು ಬಗೆಹರಿಸಿಕೊಳ್ಳಲು ಟೈಮ್ ಹಿಡಿಯುತ್ತೆ ಅಂತ ಹೇಳಿದ್ದೆ. ಆದರೆ, ಈ ರೀತಿ ಭ್ರಷ್ಟಾಚಾರ ಮಾಡಲು ಹೇಳಿದ್ದೆನಾ? ಎಂದು ಕಿಡಿಕಾರಿದ್ದಾರೆ.
ಅಣ್ಣನ ಮಾತು ಕೇಳ್ತಾರಾ?
ಅಣ್ಣ.. ಅಣ್ಣ.. ಅಂತಾರೆ. ಅಣ್ಣನ ಮಾತು ಕೇಳ್ತೀನಿ ಅಂತಾರೆ. ಹಾಗಾದ್ರೆ, ಅಣ್ಣನಾಗಿ ಒಂದು ಮಾತು ಹೇಳ್ತೀನಿ ಕೇಳ್ತಾರಾ? ಮೊದಲು ಭ್ರಷ್ಟಾಚಾರ ಮಾಡೋದು, ಲೂಟಿ ಹೊಡೆಯೋದು ನಿಲ್ಲಿಸಲಿ. ಇನ್ನೂ ಐದು ವರ್ಷಗಳ ಕಾಲ ಅವರೇ ಡಿಸಿಎಂ ಆಗಿ ಇರಲಿ. ಆದರೆ, ಜನರ ಹಣ ಲೂಟಿ ಮಾಡೋದು ನಿಲ್ಲಿಸಲಿ. ಈ ಮಾತು ಕೇಳ್ತಾರಾ ಅವರು ಎಂದು ಡಿಕೆಶಿಗೆ ಚಾಟಿ ಬೀಸಿದ್ದಾರೆ.