ಕೊಪ್ಪಳ : ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವರಿಷ್ಠರ ಕಡೆ ಬೊಟ್ಟು ಮಾಡಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಏನು ಸೂಚನೆ ಕೊಡುತ್ತಾರೋ ಅದನ್ನು ಪಾಲನೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪಕ್ಷ ಏನು ಜವಾಬ್ದಾರಿ ನೀಡುತ್ತೋ ಅದನ್ನು ನಿಭಾಯಿಸುತ್ತೇನೆ. ಲೋಕಸಭಾ ಚುನಾವಣೆಯ ಬಗ್ಗೆ ಎಲ್ಲೂ ಚರ್ಚೆ ಆಗಿಲ್ಲ. ರಾಜ್ಯದಲ್ಲಿ ಕನಿಷ್ಠ ಅಂದ್ರೂ 15 ಸ್ಥಾನ ಗೆಲ್ಲುತ್ತೇವೆ. ಅದು 20 ಸ್ಥಾನಕ್ಕೂ ಹೋಗಬಹುದು. ಧಾರವಾಡ ಸೇರಿದಂತೆ ಪಕ್ಷ ಗೆಲ್ಲಿಸುವಂತ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಸಂವಿಧಾನ ತಜ್ಞನಿಗೆ ಕನಿಷ್ಠ ಜ್ಞಾನವೂ ಇಲ್ಲ : ಬಿಜೆಪಿ ಲೇವಡಿ
ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ
ನನಗೆ ಕಾಂಗ್ರೆಸ್ ಪಕ್ಷ ಎಂಎಲ್ಸಿ ಮಾಡಿ ಗೌರವದಿಂದ ನಡೆಸಿಕೊಳ್ಳುತ್ತಿದೆ. ಇನ್ನು ಹೆಚ್ಚಿನ ಸ್ಥಾನಮಾನ ಕೊಡ್ತೀನಿ ಅಂದಿದ್ದಾರೆ. ಒಮ್ಮೆ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಹೊರ ಬಂದವರು. ಮರಳಿ ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎನ್ನುವ ಮೂಲಕ ಊಹಾಪೋಹಗಳಿಗೆ ಜಗದೀಶ್ ಶೆಟ್ಟರ್ ತೆರೆ ಎಳೆದಿದ್ದಾರೆ.
ರೌಡಿ ಶೀಟರ್ಗಳನ್ನು ಎಲೆಕ್ಷನ್ಗೆ ನಿಲ್ಲಿಸುತ್ತಾರೆ
ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಏನಾಗಿದೆ? ಓರ್ವ ವಿಪಕ್ಷ ನಾಯಕರನ್ನು ನೇಮಿಸೋಕೆ ಆಗ್ತಿಲ್ಲ. 66 ಸ್ಥಾನಗಳಿಗೆ ಕುಸಿದಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರ ಅವಧಿ ಮುಗಿದ್ರು, ಅಧ್ಯಕ್ಷರ ನೇಮಕ ಮಾಡ್ತಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಲೀಡರ್ಗಳೇ ಸಿಗುತ್ತಿಲ್ಲ. ಯಾವ ಪಕ್ಷದಲ್ಲಿಯೂ ಸಿದ್ಧಾಂತ, ನೈತಿಕತೆ ಉಳಿದಿಲ್ಲ. ಬಿಜೆಪಿಯವರು ರೌಡಿ ಶೀಟರ್ಗಳನ್ನು ಎಲೆಕ್ಷನ್ಗೆ ನಿಲ್ಲಿಸುತ್ತಾರೆ. ಏನು ಉಳಿದಿದೆ ಆ ಪಕ್ಷದಲ್ಲಿ ಎಂದು ವಾಗ್ದಾಳಿ ನಡೆಸಿದ್ದಾರೆ.