ಬೆಂಗಳೂರು : ಈಗ ನಮ್ಮ ಸರ್ಕಾರ ಬಂದ ಮೇಲೆ ಸ್ವಲ್ಪ ಹೆಚ್ಚು ವರ್ಗಾವಣೆಗಳು ಆಗಿರಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದು ಇನ್ನೂ ಎರಡು ತಿಂಗಳು ಆಗಿಲ್ಲ. ಆದರೆ, ಕೆಲವರು ಟೀಕೆ ಮಾಡಿದ್ದಾರೆ ಎಂದು ಬೇಸರಿಸಿದರು.
ವಿಪಕ್ಷಗಳು ವರ್ಗಾವಣೆ ದಂಧೆಗಳು ಆಗಿವೆ ಎಂದಿದ್ದಾರೆ. ಹಾದಿ-ಬೀದಿಯಲ್ಲಿ ಮಾತಾಡ್ತಿದ್ದಾರೆ ಎಂದಿದ್ದಾರೆ. ಸಾಮಾನ್ಯವಾಗಿ ವರ್ಗಾವಣೆಗಳು ಆಗೋದು ಸಹಜ. ಬಿಜೆಪಿ ಸರ್ಕಾರದಲ್ಲಿ, ಕುಮಾರಸ್ವಾಮಿ ಸರ್ಕಾರದಲ್ಲಿ, ನಮ್ಮ ಕಾಲದಲ್ಲೂ ಆಗಿದೆ ಎಂದು ಕುಟುಕಿದರು.
ಆಡಳಿತಾತ್ಮಕವಾಗಿ ವರ್ಗಾವಣೆ
ವರ್ಗಾವಣೆಗಳು ಅನೇಕ ಕಾರಣಗಳಿಗೆ ಆಗುತ್ತವೆ. ಹಿಂದಿನ ಸರ್ಕಾರ ಇದ್ದಾಗ ಅವರ ಶಾಸಕರಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿರಬಹುದು. ನಮ್ಮ ಸರ್ಕಾರ ಬಂದ ಮೇಲೆ ಆಡಳಿತಾತ್ಮಕವಾಗಿ ವರ್ಗಾವಣೆಗಳು ಆಗಿವೆ. ಆದರೆ, ವರ್ಗಾವಣೆ ಆದ ಕೂಡಲೇ ದಂಧೆ, ವ್ಯಾಪಾರ ನಡೆದಿದೆ ಎಂಬುದು ಹಾಸ್ಯಸ್ಪದ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಚಾಟಿ ಬೀಸಿದರು.
ಇದನ್ನೂ ಓದಿ : ಜಯಚಂದ್ರ ಈ ಬಾರಿ ಚುನಾವಣೆ ಹೇಗೆ ಮಾಡಿದ್ರು ಅಂತ ನನಗೆ ಗೊತ್ತಿದೆ : ಹೆಚ್.ಡಿ ಕುಮಾರಸ್ವಾಮಿ
ಒಂದೇ ಒಂದು ವರ್ಗಾವಣೆ ಆಗಿಲ್ಲ
ನನ್ನ ಇಲಾಖೆಯಲ್ಲಿ ಈವರೆಗೂ ಒಂದೇ ಒಂದು ವರ್ಗಾವಣೆ ಆಗಿಲ್ಲ .ಕುಮಾರಸ್ವಾಮಿ, ಬೊಮ್ಮಾಯಿ ಸೇರಿದಂತೆ ಹಲವರು ವರ್ಗಾವಣೆ ದಂಧೆ ಎಂದು ಹೇಳುತ್ತಿದ್ದಾರೆ. ಅವರ ಮಾತನ್ನು ನಾನು ವಿರೋಧಿಸುತ್ತೇನೆ. ಆರೋಪ ಮಾಡಿದವರದ್ದು ಕಪೋಲಕಲ್ಪಿತ ಅಂದುಕೊಂಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಯಾವುದೇ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯಲು ಸಾಧ್ಯವೇ ಇಲ್ಲ. ನನಗೆ ಗೊತ್ತಿಲ್ಲದೆ ಯಾರಾದರು ಭ್ರಷ್ಟಾಚಾರ ಮಾಡಿದ್ದರೋ ಅದು ಗೊತ್ತಿಲ್ಲ. ಸಂಪೂರ್ಣವಾಗಿ ಭ್ರಷ್ಟಾಚಾರವೇ ಇಲ್ಲ ಅಂತ ನಾನು ಹೇಳಲ್ಲ. ಗೊತ್ತಿದ್ದೂ ಕೂಡ ಭ್ರಷ್ಟಾಚಾರ ಆಗಲು ಸಾಧ್ಯವೇ ಇಲ್ಲ ಎಂದರು.