ಮಂಡ್ಯ : ಯಾರು ರಾಜ್ಯಕ್ಕೆ, ರಾಷ್ಟ್ರಕ್ಕೆ ಮೋಸ ಮಾಡಿದ್ದಾರೆ, ಅವರನ್ನು ಕೋರ್ಟ್ ಮೆಟ್ಟಿಲು ಏರಿಸಲೇಬೇಕು ಎಂದು ಸುಪ್ರೀಂಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರಗಳು ಬೇಕಾದ ಅಧಿಕಾರಿಗಳನ್ನು ಇಟ್ಟುಕೊಳ್ಳೋದು, ರಕ್ಷಣೆ ಮಾಡೋದು ತಪ್ಪು ಬೇಸರಿಸಿದರು.
ಹೊಸ ಸರ್ಕಾರಗಳು ಬಂದಾಗ ಹಳೆ ಸರ್ಕಾರದ ಭ್ರಷ್ಟಚಾರ ತನಿಖೆ ಮಾಡ್ತೇವೆ ಅಂತಾರೆ. ಬಳಿಕ ತನಿಖೆಯೂ ಇಲ್ಲ, ವರದಿ ಮೇಲೆ ಕ್ರಮವೂ ಇಲ್ಲ. ಇದು ಮತದಾರರನ್ನು ಮಂಕುಗೊಳಿಸುವ ಪ್ರಯತ್ನ. ಅಂತಹ ಮಾತುಗಳ ಬದಲು ಅದನ್ನು ಪೂರೈಸಬೇಕು ಎಂದು ಹೇಳಿದರು.
ಎಲ್ಲಾ ಸರ್ಕಾರವು ತನಿಖಾ ಸಂಸ್ಥೆಗಳನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡ್ತಾರೆ. ವಿರೋಧ ಪಕ್ಷ ಅಂತ ಸುಮ್ಮನೆ ಆರೋಪ ಮಾಡ್ತಾರೆ ಅನ್ನೋದು ಸರಿಯಲ್ಲ. ಅದನ್ನು ಕೋರ್ಟ್ ಹೇಳಬೇಕು, ಇವರು ಹೇಳೋದು ಬೇಡ. ಕೊಟ್ಟ ಮಾತನ್ನು ಈಡೇರಿಸಿ ಪೂರೈಸಲೇಬೇಕು ಎಂದು ಸಂತೋಷ್ ಹೆಗ್ಡೆ ಆಗ್ರಹಿಸಿದರು.
ಇದನ್ನೂ ಓದಿ : ಸೋಲನ್ನು ಒಂದು ಕೆಟ್ಟ ಕನಸು ಅಂತ ಒಪ್ಪಿಕೊಳ್ಳಬೇಕು : ಕೆ.ಎಸ್ ಈಶ್ವರಪ್ಪ
ಕೆಳಹಂತದ ಅಧಿಕಾರಿಗಳ ಮೇಲೆ ದಾಳಿ
ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ರಕ್ಷಣೆ ನೀಡುತ್ತಿರುವ ಬಗ್ಗೆ ಮಾತನಾಡಿ, ಸರ್ಕಾರಗಳು ತನಿಖೆಗಳನ್ನು ಬಹಿರಂಗಪಡಿಸಬೇಕು. ಇತ್ತೀಚೇಗೆ ಲೋಕಾಯುಕ್ತ ಸಂಸ್ಥೆ 12 ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ಇದು ಒಳ್ಳೆಯ ವಿಚಾರ, ಲೋಕಾಯುಕ್ತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದ್ರೆ ಇದಕ್ಕಿಂತ ದೊಡ್ಡ ಅಧಿಕಾರಿಗಳ ಮೇಲು ದಾಳಿಯಾಗಬೇಕು. ಕೆಳ ಹಂತದ ಅಧಿಕಾರಿಗಳಿಂದ ಮೇಲಂತದ ಅಧಿಕಾರಿಗಳ ಮೇಲೆ ದಾಳಿ ಬೇಡ. ಮೇಲಾಧಿಕಾರಿಗಳಿಂದ ಕೆಳಹಂತದ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿಯಾಗಲಿ ಎಂದು ಸಲಹೆ ನೀಡಿದರು.
ದುಡ್ಡು ಕೊಡುವ ನಿರ್ಧಾರ ತಪ್ಪು
ಪಡಿತರ ಬದಲು 5 ಕಿಲೋ ಅಕ್ಕಿಗೆ ದುಡ್ಡು ಕೊಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನ್ನ ಪ್ರಕಾರ ಅಕ್ಕಿ ಬದಲು ದುಡ್ಡು ಕೊಡುವ ನಿರ್ಧಾರ ಸಂಪೂರ್ಣ ತಪ್ಪು. ಶ್ರಮದಿಂದ ಹಣ ಪಡೆದುಕೊಳ್ಳಬೇಕು. ದಾನದಿಂದ ದುಡ್ಡು ಪಡೆಯೋದು ಸರಿಯಲ್ಲ. ವಿದ್ಯೆ, ಆರೋಗ್ಯ ನೀಡೋದು ಸರ್ಕಾರದ ಜವಾಬ್ದಾರಿ. ಅದನ್ನು ಸರ್ಕಾರ ನಿಭಾಯಿಸಲಿ. ಸರ್ಕಾರಿ ಶಾಲೆ, ಆಸ್ಪತ್ರೆಯ ಸೌಲಭ್ಯಗಳನ್ನು ಹೆಚ್ಚು ಮಾಡಲಿ. ಮತದಾರಿಗೆ ಆಮಿಷವೊಡ್ಡೋದು ಚುನಾವಣಾ ಕಾನೂನು ಪ್ರಕಾರ ತಪ್ಪು ಎಂದು ಹೇಳಿದರು.