ಕೋಲಾರ : ಜಿಲ್ಲೆಯಾದ್ಯಂತ ಟಮೆಟೋ ಬೆಳೆ ರೋಗಬಾದೆಗೆ ಗುರಿಯಾಗಿದ್ದು ಟಮೆಟೋ ಇಳುವರಿಯಲ್ಲಿ ಭಾರಿ ಕುಸಿತ ಕಂಡಿದೆ ಇದರಿಂದಾಗಿ ಟಮೆಟೋ ಬೆಳೆಯನ್ನು ನಂಬಿಕೊಂಡಿರುವ ಬೆಳೆಗಾರರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಸರಿ ಸುಮಾರು ನಲವತ್ತು ಸಾವಿರ ಎಕರೆ ಪ್ರದೇಶದಲ್ಲಿ ಟಮೆಟೋ ಬೆಳೆ ಬೆಳೆಯಲಾಗುತ್ತಿದೆ. ಉತ್ತಮ ರುಚಿ ಮತ್ತು ಬಹು ದಿನದವರೆಗೂ ಕೆಡದಿರುವ ಗುಣಮಟ್ಟಕ್ಕೂ ಕೋಲಾರ ಟಮೆಟೋ ಹೆಸರುವಾಸಿಯಾಗಿದೆ. ಅಲ್ಲದೇ ವಿದೇಶದಲ್ಲಿಯೂ ಈ ಜಿಲ್ಲೆಯ ಟಮೆಟೋ ಬೆಳೆಗೆ ಉತ್ತಮ ಮಾರುಕಟ್ಟೆಯಿದೆ. ಆದರೆ, ಇದೀಗ ಟಮೆಟೋ ಬೆಳೆಗೆ ಅಂಟಿರುವ ಕೀಟ ಬಾದೆಯಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿಯುವ ಭೀತಿ ಉಂಟಾಗಿದೆ.
ಇದನ್ನೂ ಓದಿ: ಟ್ರಾಫಿಕ್ ಜಾಮ್ ನಡುವೆ ನೈಸ್ ರಸ್ತೆ ಟೋಲ್ ಶುಲ್ಕ ಹೆಚ್ಚಳ
ಕೋಲಾರ ಜಿಲ್ಲೆಯೂ ಮಳೆಗಾಲ ಸೇರಿದಂತೆ ವರ್ಷಪೂರ್ತಿ ಟಮೆಟೋ ಬೆಳೆಯುವಂತ ನೈಸರ್ಗಿಕ ಅನುಕೂಲತೆಯಿದೆ. ಆದರೆ, ಕಳೆದ ಎರಡು ವರ್ಷಗಳಿಂದಲೂ ಇಲ್ಲಿನ ಟಮೆಟೋ ಬೆಳೆಗೆ ಹಲವು ರೀತಿಯ ಹುಳುಗಳ ಕಾಟ ಮತ್ತು ರೋಗಬಾಧೆಯಿದೆ. ಬೆಳೆಯನ್ನು ಕಾಪಾಡಿಕೊಳ್ಳಲು ರೈತರು ಮಾಡುತ್ತಿರುವ ಪ್ರಯತ್ನವು ನೀರಿನಲ್ಲಿ ಹೋಮ ಮಾಡಿದಂತಾಗಿದೆ ಎಂದು ಸ್ಥಳೀಯರಾದ ಗುರುಮೂರ್ತಿ, ಬೆಗ್ಲಿ ಹೊಸಹಳ್ಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬಳಿಕ ಕೃಷಿಕರಾದ ಗಂಗರಾಜು ಮಾತನಾಡಿ, ಪ್ರಸ್ತುತ ಕೋಲಾರ ಜಿಲ್ಲೆಯ ಸಗಟು ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಟಮೆಟೋಗೆ ನೂರು ರುಪಾಯಿ ಬೆಲೆಯಿದೆ. ಹೊರರಾಜ್ಯ ಮತ್ತು ಹೊರದೇಶದ ವರ್ತಕರೂ ಕೂಡಾ ಟಮೆಟೋ ಖರೀದಿಗಾಗಿ ಇಲ್ಲಿ ಕಾದು ಕುಳಿತಿದ್ದಾರೆ. ಆದರೆ, ಜಿಲ್ಲೆಯಲ್ಲಿನ ಅರ್ಧದಷ್ಟೂ ಟಮೆಟೋ ಬೆಳೆ ತೋಟದಲ್ಲಿಯೇ ನಾಶವಾಗುತ್ತಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದು ಸರ್ಕಾರದ ನೆರವಿನ ಹಸ್ತಕ್ಕೆ ಕಾದು ಕುಳಿತ್ತಿದ್ದಾರೆ ಎನ್ನುತ್ತಿದ್ದಾರೆ.
ವರ್ಷಪೂರ್ತಿ ದೇಶ-ವಿದೇಶದ ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಂತೆ ಟಮೆಟೋ ಪೂರೈಸುತ್ತಿದ್ದ ಕೋಲಾರ ಜಿಲ್ಲೆಯ ಟಮೆಟೋಗೆ ಕಳಂಕ ಮೆತ್ತಿಕೊಳ್ಳಲು ಶುರುವಾಗಿದೆ. ಸರ್ಕಾರವು ರೈತರಿಗೆ ಮನವಿಗೆ ಸ್ಪಂದಿಸಿ ಅಗತ್ಯ ಕ್ರಮ ಜರುಗಿಸಬೇಕಾಗಿದೆ.
- ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ