ನವದೆಹಲಿ : ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಭೇಟಿಗೆ ತೆರಳುವ ಮುನ್ನ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.
ನಾನು ಎಲ್ಲ ಮಾಜಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುತ್ತಿದ್ದೇನೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಎಸ್.ಎಂ ಕೃಷ್ಣ, ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿದ್ದೇನೆ. ಡಿ.ವಿ ಸದಾನಂದಗೌಡರ ಭೇಟಿಗೂ ಸಮಯ ಕೇಳಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಸವರಾಜ ಬೊಮ್ಮಾಯಿ ಭೇಟಿಯಾದ ಡಿ.ಕೆ ಶಿವಕುಮಾರ್
ಕೆಲವರು ಟೀಕೆ ಮಾಡ್ತಾರೆ
ಅವರನ್ನು ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಚುನಾವಣಾ ರಾಜಕೀಯವೇ ಬೇರೆ, ಅಭಿವೃದ್ಧಿ ರಾಜಕೀಯವೇ ಬೇರೆ. ಯಾರೋ ಕೆಲ ಬಿಜೆಪಿ ನಾಯಕರು ಅದರ ಬಗ್ಗೆ ಟೀಕೆ ಮಾಡ್ತಾರೆ ಅಂತ ತಲೆಕೆಡಿಸಿಕೊಳ್ಳಲ್ಲ. ಹಿರಿಯರ, ಅನುಭವಿಗಳ ಅನುಭವ ಪಡೆಯುವುದರಲ್ಲಿ ತಪ್ಪಿಲ್ಲ ಎಂದು ಡಿ.ಕೆ ಶಿವಕುಮಾರ್ ಸಮಜಾಯಿಷಿ ನೀಡಿದ್ದಾರೆ.
ನೀರಾವರಿ ಬಗ್ಗೆ ಸಮಾಲೋಚನೆ
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಭೇಟಿ ಮಾಡಲಿದ್ದೇನೆ. ಮೇಕೆದಾಟು ಮಾತ್ರವಲ್ಲ, ರಾಜ್ಯದ ಸಮಗ್ರ ಹಲವು ಯೋಜನೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ನೀರಾವರಿ ಇಲಾಖೆ ಬಗ್ಗೆ ಸಮಾಲೋಚನೆ ಮಾಡಲಾಗುತ್ತದೆ. ಮೊದಲ ಬಾರಿಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.