ಬೆಂಗಳೂರು: ಜತಿನ್ ರಾಮ್ ಮಾಂಝಿ ಬಳಿಕ ಇದೀಗ ಜೆಡಿಎಸ್ ಸಹ ಮಹಾಘಟಬಂಧನ್ ನಿಂದ ಹೊರಬರುವ ಲಕ್ಷಣಗಳು ಕಾಣಿಸುತ್ತಿವೆ. ಮಹಾಘಟಬಂಧನ್ನ ಮುಂದಿನ ಕಾರ್ಯತಂತ್ರಗಳ ಬಗ್ಗೆ ನಿರ್ಧರಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆದಿರುವ ಪ್ರತಿಪಕ್ಷಗಳ ಪ್ರಮುಖರ ಸಭೆಯಲ್ಲಿ ಪಾಲ್ಗೊಳ್ಳದಿರಲು ಜೆಡಿಎಸ್ ನಿರ್ಧರಿಸಿದೆ.
ಹೌದು, ಮಹಾಘಟಬಂಧನ್ ನಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸುತ್ತಿರುವುದಕ್ಕೆ ಜೆಡಿಎಸ್ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕದಲ್ಲಿ ಜೆಡಿಎಸ್ ಕಾಂಗ್ರೆಸ್ ವಿರುದ್ದ ಸ್ಪರ್ಧಿಸುತ್ತಿದೆ. ಹೀಗಿರುವಾಗ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪ್ರಮುಖವಾಗಿರುವ ಮಹಾಘಟಬಂಧನ್ ನಲ್ಲಿ ಸೇರ್ಪಡೆಯಾದರೆ ಮುಜುಗರವಾಗುತ್ತದೆ. ಹಾಗಾಗಿ ತಾವು ಮಹಾಘಟಬಂಧನ್ ನಲ್ಲಿ ಭಾಗಿಯಾಗುತ್ತಿಲ್ಲ ಎಂದು ಜೆಡಿಎಸ್ ಪ್ರಮುಖರು ತಿಳಿಸಿದ್ದಾರೆ.
ಇದನ್ನೂ ಓದಿ: ವಿಪಕ್ಷಗಳ ಸಭೆಯಿಂದ ಜೆಡಿಎಸ್ ಔಟ್ : ದಳಪತಿಗಳು ಹೊರಗುಳಿಯಲು ಕಾರಣ ಏನು ?
ರಾಜ್ಯದಲ್ಲಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್ ಭದ್ರ ನೆಲೆ ಹೊಂದಿದೆ.ಈ ಭಾಗದಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಗೆ ಲಾಭಕ್ಕಿಂತ ಹಾನಿಯೇ ಹೆಚ್ಚು. ಅಲ್ಲದೆ, ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಮಹಾಘಟಬಂಧನ್ ಅಧಿಕಾರದಲ್ಲಿ ದೊಡ್ಡ ಪಾಲು ಪಡೆದುಕೊಳ್ಳುತ್ತದೆ.
ಇನ್ನೂ ಸಣ್ಣ ಪಕ್ಷವಾಗಿರುವ ಜೆಡಿಎಸ್ ಗೆ ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ್ ನಲ್ಲಿ ಹೆಚ್ಚಿನ ಅಧಿಕಾರದ ಪಾಲು ದಕ್ಕುವುದಿಲ್ಲ ಎಂಬುದು ಜೆಡಿಎಸ್ ವರಿಷ್ಟರಿಗೆ ಸ್ಪಷ್ಟವಾಗಿ ಮನವರಿಕೆಯಾಗಿದೆ. ಹಾಗಾಗಿಯೇ ನಾಳೆ ಪಾಟ್ನಾದಲ್ಲಿ ನಡೆಯುವ ಮಹಾಘಟಬಂಧನ್ ಪ್ರಮುಖರ ಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಜೆಡಿಎಸ್ ಪ್ರಮುಖರು ಸ್ಪಷ್ಟಪಡಿಸಿದ್ದಾರೆ.