Wednesday, January 22, 2025

5 ಸಿಎಂಗಳೊಂದಿಗೆ ಕೆಲಸ ಮಾಡಿ ಆಮೇಲೆ ಸಿಎಂ ಆದವನು ನಾನು : ‘ಕೈ’ಗೆ ಬೊಮ್ಮಾಯಿ ವಾರ್ನಿಂಗ್

ಬೆಂಗಳೂರು : ಐದು ಜನ ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿ ಆಮೇಲೆ ಸಿಎಂ ಆದವನು ನಾನು ಹುಷಾರ್ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿಗ್ಗಾವಿ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಪ್ರಾರಂಭವಾಗಿತ್ತು. ಈ ವೇಗ ನಿಲ್ಲಲು ಅವಕಾಶ ಕೊಡುವುದಿಲ್ಲ. ಅಭಿವೃದ್ಧಿ ಕೇಲಸ ನಿಲ್ಲಿಸಲು ಸಾಧ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಕಟ್ಟೆ ಮೇಲೆ ಕುಳಿತು ನಾಲ್ಕು ಜನ ನಮ್ಮ ಸರಕಾರ ಅಂದ್ರೆ ನಡೆಯುವುದಿಲ್ಲ, ನಾವು ಬಿಡುವುದಿಲ್ಲ. ಇದು ಎಲ್ಲರ ಸರಕಾರ, ಒಂದು ಪಕ್ಷ ವ್ಯಕ್ತಿಯ ಸರಕಾರ ಅಲ್ಲ. ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ಯಾರಾದ್ರು ಅಡ್ಡ ಬಂದ್ರೆ ನಾನು ಸಹಿಸುವುದಿಲ್ಲ. ಐದು ಜನ ಸಿಎಂ ಜೊತೆ ಕೇಲಸ ಮಾಡಿ ಆಮೇಲೆ ಸಿಎಂ ಆದವನು ನಾನು ಎಂದು ಹೇಳಿದ್ದಾರೆ.

ಅಭಿವೃದ್ಧಿ ಅಡ್ಡಿಪಡಿಸಿದ್ರೆ ಯಾರಪ್ಪಂಗು ಕೇಳಲ್ಲ

ಎಲ್ಲೆಲ್ಲಿ ಏನು ನಡೆಯುತ್ತದೆ ಎನ್ನುವುದು ಗೊತ್ತಿದೆ. ನನ್ನ ಜನರಿಗಾಗಿ ಯಾವುದೇ ಹಂತಕ್ಕೆ ಮಟ್ಟಕ್ಕೆ ಬರಲು ತಯಾರಿದಿನಿ. ಅಭಿವೃದ್ಧಿ ರಥಕ್ಕೆ ಅಡ್ಡಿಪಡಿಸಿದ್ರೆ ಯಾರಪ್ಪಂಗು ಕೇಳಲ್ಲ. ರಾಜಕಾರಣ ಮಾಡಿ, ಅಡ್ಡಗಾಲು ಹಾಕುವ ರಾಜಕಾರಣ ಒಳ್ಳೆಯದಲ್ಲ. ಇದು ನಿಮಗೆ, ನಿಮ್ಮ‌ಸರಕಾರಕ್ಕೆ ಒಳ್ಳೆಯದಲ್ಲ ಎಂದು ಬೊಮ್ಮಾಯಿ ಗುಡುಗಿದ್ದಾರೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ ಆದ್ಮೇಲೆ ಸರ್ಕಾರ ನಡೆಯುತ್ತೋ, ಇಲ್ವೋ? : ಹೆಚ್.ಡಿ ಕುಮಾರಸ್ವಾಮಿ ಟಕ್ಕರ್

ಇವರು ಜನರ ಕನಸು ನನಸು ಮಾಡಲ್ಲ

ಸಿಎಂ ಯಾರಾಗಬೇಕು ಎಂದು ಒಂದು ವಾರ ಬಡಿದಾಟ ಮಾಡಿದ್ರು. ಮಂತ್ರಿಯಾದರಿಗೆ ಖಾತೆ ಇಲ್ಲ, ಈಗ ಮಂತ್ರಿಯಾಗಲು ಬಡಿದಾಟ ಆರಂಭವಾಗಿದೆ. ಎಲ್ಲವನ್ನು ಮುಖ್ಯಮಂತ್ರಿ ಕೈಯಲ್ಲಿ ಇಟ್ಟುಕೊಂಡು ಕುಂತಿದ್ದಾರೆ. ಬಹಳ ಜನ ಮಂತ್ರಿ ಕನಸು ಕಾಣ್ತಿದಾರೆ. ಮಂತ್ರಿಯಾದವರು ಖಾತೆ ಕನಸು ಕಾಣ್ತಿದಾರೆ. ಇವರು ಜನರ ಕನಸು ನನಸು ಮಾಡಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಗ್ಯಾರಂಟಿ ಗಳಗಂಟಿ ಅಂತಾ ಹೇಳಿದ್ದೆ

ನಾನು ಹಿಂದೆ ಹೇಳಿದ್ದೆ, ಚುನಾವಣೆವರೆಗೆ ಗ್ಯಾರಂಟಿ ಆಮೇಲೆ ಗಳಗಂಟಿ ಅಂತಾ. ಕೋವಿಡ್ ನಂತರ ನಾಡನ್ನು ಸದೃಢ ಮಾಡಿದ್ದು ನಾವು. ಇವರು ಬಂದು ಎಲ್ಲವನ್ನು ನಿಲ್ಲಿಸಿದ್ದಾರೆ. ರಸ್ತೆ, ಕುಡಿಯುವ ನೀರು, ಆಸ್ಪತ್ರೆ ಕೇಲಸ ನಿಲ್ಲಿಸಿದ್ದಾರೆ. ಸಿಎಂ ರಾಜ್ಯದ ಮಾಲೀಕರಲ್ಲ, ಎಚ್ಚರಿಕೆಯಿಂದ ಸರಕಾರ ನಡೆಸಬೇಕು ಎಂದು ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES