Saturday, May 18, 2024

ಈದ್ಗಾ ಮೈದಾನದಲ್ಲಿ ಶಾಂತಿಯುತ ಕನಕದಾಸ ಜಯಂತಿ ಆಚರಣೆ

ಹುಬ್ಬಳ್ಳಿ: ಹುಬ್ಬಳ್ಳಿ ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಬೆನ್ನಲ್ಲೇ, ಇಂದು ಶ್ರೀರಾಮಸೇನೆಯಿಂದ ದಾಸ ಶ್ರೇಷ್ಠ ಕನಕದಾಸರ ಜಯಂತಿಯನ್ನು ಶ್ರದ್ಧಾ ಮತ್ತು ಭಕ್ತ ಪೂರ್ವಕವಾಗಿ ಆಚರಣೆ ಮಾಡಲಾಯಿತು.

ಎಐಎಂಐಎಂ ಪಕ್ಷದಿಂದ ಮೈದಾನದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅನುಮತಿ ಕೇಳಿಬಂದ ಹಿನ್ನೆಲೆ, ಶ್ರೀರಾಮಸೇನೆಯೂ‌‌ ಸಹ ಕನಕದಾಸರ ಜಯಂತಿ ಆಚರಣೆಗೆ ಅನುಮತಿ ಕೋರಿ ಪಾಲಿಕೆಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಗಳನ್ನು ಪರಿಶೀಲನೆ ನಡೆಸಿದ್ದ ಮೇಯರ್ ಸರ್ವ ಪಕ್ಷಗಳ ಸಭೆ ನಡೆಯಿಸಿ, ಮೈದಾನದಲ್ಲಿ ಎಲ್ಲಾ ಸಮುದಾಯಗಳ ಜಯಂತಿ ಆಚರಣೆಗೆ ಅನುಮತಿ ನೀಡುವ ಮೂಲಕ, ವಿವಾದಿತ ಸ್ಥಳವನ್ನು ಸಾರ್ವಜನಿಕವಾಗಿಸಿದ್ದರು. ಹೀಗಾಗಿ ಶ್ರೀರಾಮಸೇನೆಯಿಂದ ಕನಕದಾಸ ಜಯಂತಿಯನ್ನು ಶಾಂತಿಯುತವಾಗಿ ಆಚರಣೆ ಮಾಡಲಾಯಿತು.

ಜಯಂತಿ ಆಚರಣೆಗೆ ಕೇವಲ ಒಂದು ಗಂಟೆ ಅವಕಾಶ ನೀಡಿತ್ತು. ಅಲ್ಲದೆ ಈ ಹಿಂದಿನಂತೆ ಮೈದಾನದ ನಡುವೆ ಪರದೆಯನ್ನು ಕಟ್ಟಲಾಗಿತ್ತು. ಇನ್ನೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದ ಸ್ಥಳದಲ್ಲಿಯೇ, ಅದೇ ಅಳತೆಯಲ್ಲಿಯೇ ಹಾಕಿದ್ದ ಪೆಂಡಾಲ್ ಟೆಂಟ್ ನಲ್ಲಿ, ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಕನಕದಾಸರ ಚಿಂತನೆಗಳನ್ನು ಸ್ಮರಣ ಮಾಡಿದರು.

ಇದಕ್ಕೂ ಮುನ್ನ ಮುತಾಲಿಕ್ ಮೈದಾನಕ್ಕೆ ಬರುತ್ತಿದ್ದಂತೆ, ನಿನ್ನೆ ಟಿಪ್ಪು ಜಯಂತಿ ಮಾಡಿದ್ದ ಸ್ಥಳದಲ್ಲಿ ಗೋ ಮೂತ್ರ ಸಿಂಪಡಣೆ ಮಾಡಿ ಸ್ಥಳ ಶುದ್ಧೀಕರಣ ಮಾಡಿ ಟಿಪ್ಪು ಜಯಂತಿ ನಡೆಸಿದ್ದ ದಲಿತ ಹಾಗೂ ಅಲ್ಪ ಸಂಖ್ಯಾತ ಮುಖಂಡರನ್ನ ಕೆರಳಿಸುವಂತೆ ಮಾಡಿದ್ದಾರೆ. ಇನ್ನೂ ಜಯಂತಿ ಬಳಿಕ ಮಾತನಾಡಿದ ಮುತಾಲಿಕ್, ಕನಕದಾಸರು ನಾಡು ಕಂಡ ದಾಸ ಶ್ರೇಷ್ಠರು, ಇಂತಹ ಮಹಾನ್ ಪುರುಷರ ಜಯಂತಿ ಆಚರಣೆ ಮಾಡುವ ಮೂಲಕ ಈ ಸ್ಥಳ ಪವಿತ್ರವಾಗಿದೆ.. ನಿನ್ನೆ ಮತಾಂದ, ಹಿಂದೂ ವಿರೋಧಿ ಟಿಪ್ಪು ಜಯಂತಿ ಮಾಡಿ,‌ಈ ಸ್ಥಳವನ್ನು ಅಪವಿತ್ರಗೊಳಿಸಲಾಗಿತ್ತು. ಹೀಗಾಗಿ ಗೋಮೂತ್ರದಿಂದ ಸ್ಥಳ ಶುದ್ಧೀಕರಣ ಮಾಡಲಾಗಿದೆ. ಟಿಪ್ಪು ಜಯಂತಿ ವಿಚಾರದಲ್ಲಿ ಬಿಜೆಪಿ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಅಂತ ಹರಿಹಾಯ್ದರು.

ಇಷ್ಟು ದಿನ ಬರೀ ಗಲಾಟೆಗೆ ಸುದ್ದಿಯಾಗುತ್ತಿದ್ದ ಈದ್ಗಾ ಮೈದಾನ, ಈಗ ಜಯಂತಿ ಆಚರಣೆ ಮೂಲಕ ಹೆಸರು ಮಾಡುತ್ತಿದೆ. ಅದರಲ್ಲೂ ಸಹ ಎಲ್ಲಾ ಜಯಂತಿಗಳು ಶಾಂತಿಯುತವಾಗಿ ಆಚರಣೆ ಆಗಿರುವ ವಿಚಾರ. ಇನ್ನೂ ಮುಂದೆಯೂ ಸಹ ಇದೇ ರೀತಿಯಲ್ಲಿ ಜಯಂತಿಗಳು ಆಚರಣೆಗೊಂಡು, ವಿವಾದಿತ ಸ್ಥಳ ಒಳ್ಳೆಯ ಪ್ರದೇಶವಾಗಿ ಬದಲಾವಣೆಯಾಗಬೇಕಿದೆ.

ಮಲ್ಲಿಕ್ ಬೆಳಗಲಿ, ಪವರ್ ಟಿವಿ. ಹುಬ್ಬಳ್ಳಿ

RELATED ARTICLES

Related Articles

TRENDING ARTICLES