ಬೆಂಗಳೂರು : ಪ್ರೇಮಿಗಳಿಗೆ ಲಾಲ್ ಬಾಗ್ ಕೇವಲ ಹೂದೋಟವಾಗಿ ಇಷ್ಟವಾಗುತ್ತೆ ಅಷ್ಟೇ. ಆದ್ರೆ ಪ್ರಕೃತಿ ಪ್ರೇಮಿಗಳಿಗೆ ಲಾಲ್ಬಾಗ್ ನಷ್ಟೇ ಇಷ್ಟವಾಗೋದು ಅಲ್ಲಿರೋ ನರ್ಸರಿ.. ಲಾಲ್ ಬಾಗ್ ಮುಖ್ಯದ್ವಾರದ ಪಕ್ಕದಲ್ಲೇ ಇರೋ ಈ ನರ್ಸರಿ ಬೆಂಗಳೂರಿಗಷ್ಟೇ ಅಲ್ಲದೇ ಅಕ್ಕಪಕ್ಕದ ಜಿಲ್ಲೆ ಹಾಗೂ ಅನ್ಯ ರಾಜ್ಯಗಳಿಗೂ ಅಷ್ಟೇ ಫೇಮಸ್.. ಯಾಕಂದ್ರೆ, ಇಲ್ಲಿ ಸಿಗದ ಗಿಡಗಳೇ ಇಲ್ಲ. ಸಸ್ಯಜಾತಿಯ ಎಲ್ಲಾ ಬಗೆಯ ಗಿಡಗಳನ್ನೂ ಈ ನರ್ಸರಿಯಲ್ಲಿ ಮಾರಾಟ ಮಾಡಲಾಗ್ತಿತ್ತು. ಹೀಗಾಗಿ ಜನ ಬೆಂಗಳೂರು ಸೇರಿ ಹೊರ ಜಿಲ್ಲೆಗಳಿಂದಲೂ ಇಲ್ಲಿಗೆ ಬಂದು ಗಿಡಗಳನ್ನು ಖರೀದಿ ಮಾಡ್ತಿದ್ರು. ಆದ್ರೀಗ ಈ ನರ್ಸರಿಗೆ ತೋಟಗಾರಿಕಾ ಇಲಾಖೆ ಬೀಗ ಹಾಕಿದೆ.
ದಿ ನರ್ಸರಿ ಮೆನ್ ಕೊ ಆಪರೇಟಿವ್ ಸೊಸೈಟಿ ಈ ನರ್ಸರಿಯನ್ನ ನಡೆಸಿಕೊಂಡು ಬರ್ತಿದೆ. ಈ ನರ್ಸರಿ 1963ರಿಂದಲೂ ಇದ್ದು ಲಾಲ್ಬಾಗ್‌ನ ಒಂದು ಭಾಗವಾಗೇ ಗುರುತಿಸಿಕೊಂಡಿದೆ. ಆದ್ರೆ ಕಳೆದ 6 ವರ್ಷಗಳಿಂದ ಜಾಗದ ಗುತ್ತಿಗೆ ಮುಗಿದಿದ್ದು ರಿನಿವಲ್ಗಾಗಿ ದಿ ನರ್ಸರಿ ಮೆನ್ ಕೊ ಆಪರೇಟಿವ್ ಸೊಸೈಟಿ ಹಲವು ಬಾರಿ ತೋಟಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿದೆ. ಹೀಗಿದ್ರೂ ತೋಟಗಾರಿಕಾ ಇಲಾಖೆ ರಿನಿವಲ್ ಮಾಡದೇ ಕಾಲ ಹರಣ ಮಾಡ್ತಿತ್ತು. ಯಥಾಸ್ಥಿತಿ ಕಾಯ್ದುಕೊಳ್ಳಲು ಕೋರ್ಟ್ ಆದೇಶವಿದ್ದಾಗ್ಯೂ ತೋಟಗಾರಿಕಾ ಇಲಾಖೆ ಈ ಕ್ರಮ ಕೈಗೊಂಡಿರೋದು ನರ್ಸರಿ ಮೆನ್ ಕೊ ಆಪರೇಟಿವ್ ಸೊಸೈಟಿಯ ಆಕ್ರೋಶಕ್ಕೆ ಕಾರಣವಾಗಿದೆ.ಇದ್ರ ಎಫೆಕ್ಟ್ 2023ರ ಗಣರಾಜ್ಯೋತ್ಸವದಂದು ನಡೆಯಲಿರುವ ಫಲಪುಷ್ಪ ಪ್ರದರ್ಶನದ ಮೇಲೂ ತಟ್ಟೋ ಸಾಧ್ಯತೆಯಿದೆ.
ಸದ್ಯ ದಿ ನರ್ಸರಿ ಮೆನ್ ಕೊಆಪರೇಟಿವ್ ಸೊಸೈಟಿ ಒಟ್ಟು 350ಕ್ಕೂ ಹೆಚ್ಚು ನರ್ಸರಿ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿವೆ. ಇದನ್ನೇ ನಂಬಿ 2000 ಕ್ಕೂ ಹೆಚ್ಚು ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಜೊತೆಗೆ ಲಾಲ್ ಬಾಗ್ಗೆ ಬರೋ ಹೆಚ್ಚಿನ ಮಂದಿ ಇಲ್ಲಿ ಸಸ್ಯ ಖರೀದಿ ಮಾಡ್ತಾರೆ. ಇದು ಲಾಲ್ ಬಾಗ್‌ನ ಒಂದು ಪ್ರಮುಖ ಭಾಗವಾಗಿದೆ. ಹೀಗಿದ್ರೂ ತೋಟಗಾರಿಕಾ ಇಲಾಖೆ ಈಗ ಏಕಾಏಕಿ ನರ್ಸರಿಗೆ ಬೀಗ ಹಾಕಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು