ಮೈಸೂರು: ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳು ಕಾಡಿನಿಂದ ನಾಡಿಗೆ ಬರುವ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಂದು ಕೆ.ಆರ್ ನಗರ ಪಟ್ಟಣದಲ್ಲಿ ಬೆಳ್ಳಂ ಬೆಳ್ಳಗ್ಗೆ ಚಿರತೆ ಕಾಣಿಸಿಕೊಂಡಿದ್ದು ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಯತ್ನಿಸಿದೆ. ಅರಣ್ಯ ಇಲಾಖೆ ಚಿರತೆ ಕಾರ್ಯಾಬಚರಣೆ ನಡೆಸಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದು ಬೆಳ್ಳಂ ಬೆಳಿಗ್ಗೆ ನಡು ರಸ್ತೆಯಲ್ಲೇ ಕುಳಿತಿರುವ ಚಿರತೆ. ಜನರನ್ನ ಕಂಡು ಓಡುತ್ತಿರುವ ಚಿರತೆ. ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನ ಮೇಲೆ ದಾಳಿಗೆ ಯತ್ನಿಸಿದ ಚಿರತೆ ಈ ಎಲ್ಲಾ ದೃಶ್ಯಗಳು ಕಂಡು ಬಂದಿವೆ.
ಹೌದು ಕಳೆದ ಎರಡು ದಿನಗಳಿಂದ ಜಿಲ್ಲೆಯ ಕೆ.ಆರ್ ನಗರದಲ್ಲಿ ಚಿರತೆ ಕಾಣಿಸಿಕೊಂಡಿದ್ದು ಸಾರ್ವಜನಿಕರು ಭಯಬೀತರಾಗಿದ್ದರು. ನಿನ್ನೆ ರಾತ್ರಿ ಕೆ.ಆರ್ ನಗರದ ಹೆದ್ದಾರಿಯ ರಸ್ತೆ ಮಧ್ಯದಲ್ಲಿ ಚಿರತೆ ಕುಳಿತುಕೊಂಡಿರುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿತ್ತು. ಇಂದು ಬೆಳಗ್ಗೆ ಪಟ್ಟಣದ 18ನೇ ವಾರ್ಡ್ ನಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಕೆ.ಆರ್ ನಗರದಿಂದ ಮುಳ್ಳೂರಿಗೆ ಹೋಗುವ ದಾರಿಯಲ್ಲಿ ಚಿರತೆ ಕಂಡು ಸಾರ್ವಜನಿಕರು ಬೆಚ್ಚಿ ಬಿದಿದ್ದಾರೆ. ಜನರನ್ನ ಕಂಡ ಚಿರತೆ ಸಿಕ್ಕ ಸಿಕ್ಕವರ ಮೇಲೆ ದಾಳಿಗೆ ಮುಂದಾಯಿತು. ರಸ್ತೆಯಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನಮೇಲೆ ದಾಳಿ ಮುಂದಾದ ಚಿರತೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ಕಲ್ಲಿನಿಂದ ಹೊಡೆಯಲು ಮುಂದಾದ್ರು. ಚಿರತೆ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿತು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇಬ್ಬರು ಸಾರ್ವಜನಿಕರಿಗೆ ಚಿರತೆ ದಾಳಿಯಿಂದ ಸಣ್ಣಪುಟ್ಟ ಗಾಯವಾಗಿದೆ.
ಇನ್ನೂ ಚಿರತೆ ಪಟ್ಟಣಕ್ಕೆ ಬಂದಿರುವ ವಿಚಾರ ತಿಳಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆಯಿಂದಲೇ ಚಿರತೆ ಸೆರೆಗೆ ಅಲರ್ಟ್ ಆಗಿದ್ರು. ಚಿರತೆ ಕಾರ್ಯಾಚರಣೆ ಆರಂಭಿಸಿದ ಮೈಸೂರು ಮೃಗಾಲಯ ಸಿಬ್ಬಂದಿ ಹಾಗೂ ಕೆ.ಆರ್.ನಗರ ಅರಣ್ಯ ವಲಯ ಅಧಿಕಾರಿಗಳು ಖಾಲಿ ನಿವೇಶನಲ್ಲಿ ಅವಿತುಕೊಂಡಿದ್ದ ಚಿರತೆಗೆ ಅರವಳಿಕೆ ಮದ್ದು ನೀಡಿ ಚಿರತೆ ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಒಟ್ಟಾರೆ, ಚಿರತೆ ಕಾರ್ಯಾಚರಣೆಯಿಂದ ಕೆ.ಆರ್ ನಗರದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಕಾಡಿನಿಂದ ನಾಡಿಗೆ ಪ್ರಾಣಿಗಳು ಬರದಂತೆ ಅರಣ್ಯ ಇಲಾಖೆ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಬೇಕಿದೆ.
ಸುರೇಶ್ ಬಿ, ಪವರ್ ಟಿವಿ. ಮೈಸೂರು