Friday, May 17, 2024

ಮೇಲುಕೋಟೆ ರಾಜಗೋಪುರವನ್ನ ಬಾರ್ ಸೆಟ್​​ ಪರಿವರ್ತಿಸಿ ತೆಲಗು ಚಿತ್ರ ಶೂಟಿಂಗ್.!

ಮಂಡ್ಯ: ಐತಿಹಾಸಿಕ, ಪುರಾಣ ಪ್ರಸಿದ್ಧ ಮೇಲುಕೋಟೆಗೆ ಅದೇನಾಗಿದೆಯೋ ಏನೋ? ಒಂದಿಲ್ಲೊಂದು ಎಡವಟ್ಟುಗಳು ನಡೀತಾನೇ ಇದೆ. ಹಿಂದೆ ಅರ್ಚಕರ ಕಚ್ಚಾಟ ಕೋರ್ಟ್ ಮೆಟ್ಟಿಲೇರಿದ್ದಲ್ಲದೆ, ವೈರಮುಡಿ ಕಿರೀಟದ ಅರಳುಗಳ ನಾಪತ್ತೆ ಬಗ್ಗೆಯೂ ಸಾಕಷ್ಟು ಸುದ್ದಿ ಮಾಡಿತ್ತು. ಈಗ ಜಿಲ್ಲಾಡಳಿತದ ಎಡವಟ್ಟಿನಿಂದ ಪವಿತ್ರ ಮೇಲುಕೋಟೆ ಕ್ಷೇತ್ರ ಅಪವಿತ್ರವಾಗ್ತಿದೆ ಅನ್ನೋ ಆರೋಪ ದಟ್ಟವಾಗಿದೆ.

ರಾಜ್ಯದಲ್ಲಿ ಮೇಲುಕೋಟೆ ಒಂದು ಪವಿತ್ರ ಸ್ಥಳ ಎಂದು ನಂಬಿಕೆವಿದೆ. ಪ್ರತೀ ವರ್ಷ ನಡೆಯುವ ವೈರಮುಡಿ ಉತ್ಸವಕ್ಕೆ ರಾಜ್ಯವಲ್ಲದೆ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಇಲ್ಲಿಗೆ ಬರುತ್ತಾರೆ. ಅಲ್ಲದೆ, ಪ್ರತೀ ದಿನ ಸಾವಿರಾರು ಭಕ್ತರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡ್ತಾರೆ. ಇಂತಹ ಪವಿತ್ರ, ಪುಣ್ಯ ಸ್ಥಳವನ್ನ ಯಾವ ರೀತಿ ನೋಡ್ಕೋಬೇಕು ಎಂಬುದು ಜಿಲ್ಲಾಡಳಿತಕ್ಕೆ ಅರಿವಿಲ್ಲದೆ ಪರ ಭಾಷಿಗರ ಸಿನಿಮಾಕ್ಕೆ ಅನುಮತಿ ನೀಡಿದ್ರಿಂದ ಒಂದು ದೊಡ್ಡ ಎಡವಟ್ಟೇ ಮಾಡಿದೆ.

ಮೇಲುಕೋಟೆಯ ಪ್ರಸಿದ್ದ ರಾಯ ಗೋಪುರದ ಮೇಲೆ ಬಾರ್ ನಂತಹ ಸೆಟ್ ನಿರ್ಮಾಣ ಮಾಡಿ ಅಲ್ಲಿ ವಿವಿದ ಬ್ರಾಂಡ್ ಗಳ ಎಣ್ಣೆ ಬಾಟಲಿಗಳನ್ನು ಜೋಡಿಸೋ ಮೂಲಕ ಅಪವಿತ್ರ ಮಾಡಿದ್ದಾರೆ. ತೆಲುಗು ನಟ ನಾಗಚೈತನ್ಯ ಅಭಿನಯದ 3 ನಾಟ್ 2 ಚಿತ್ರ ತಂಡದಿಂದ ಈ ಅಪಮಾನವಾಗಿದೆ.

ಈ ಹಿಂದೆ ಸಹ ತೆಲುಗು ಚಿತ್ರತಂಡವೊಂದು ಮೇಲುಕೋಟೆಯ ಕಲ್ಯಾಣಿಯಲ್ಲಿ ಅವಾಂತರ ಸೃಷ್ಠಿಸಿ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಆದ್ರೆ, ಈಗ ಜಿಲ್ಲಾಡಳಿತ ಷರತ್ತು ಬದ್ದ ಅನುಮತಿ ನೀಡಿದ್ದರೂ ಸಹ ಈ ರೀತಿ ಪಾರಂಪರಿಕ ರಾಯಗೋಪುರದ ಮೇಲೆ ಭಾರೀ ಗಾತ್ರದ ಕಬ್ಬಿಣದ ಕಂಬ ಬಳಸಿದ್ದಲ್ಲದೆ, ಬಾರ್ ರೀತಿಯ ಸೆಟ್ ನಿರ್ಮಾಣ ಮಾಡಿ ಅಲ್ಲಿ ಯಾವುದೋ ದೊಡ್ಡ ಪಾರ್ಟಿ ನಡೆಸುವಂತೆ ಸಿದ್ಧತೆ ಮಾಡಿಕೊಂಡಿರೋದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ಮೇಲುಕೋಟೆಯ ಪರಂಪರೆ ಉಳಿಸೋ ನಿಟ್ಟಲ್ಲಿ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು. ಅದನ್ನು ಬಿಟ್ಟು ಈ ರೀತಿ ಅನುಮತಿ ನೀಡ್ತಾ ಹೋದ್ರೆ ಮುಂದೇನು. ಈಗಾಲಾದ್ರು ಎಚ್ಚೆತ್ತು. ನಮ್ಮ ಸಂಸ್ಕೃತಿ ಬಿಂಬಿಸುವ ಚಿತ್ರಗಳ ಚಿತ್ರೀಕರಣಕ್ಕೆ ಅನುಮತಿ ನೀಡಿ, ಮೇಲುಕೋಟೆಯ ಪರಂಪರೆ ಉಳಿಸುವರೇ ಕಾದು ನೋಡಬೇಕಿದೆ.

ಬಾಲಕೃಷ್ಣ ಜೀಗುಂಡಿಪಟ್ಟಣ, ಪವರ್ ಟಿವಿ, ಮಂಡ್ಯ.

RELATED ARTICLES

Related Articles

TRENDING ARTICLES