Wednesday, January 22, 2025

ಯಡಿಯೂರಪ್ಪಗೆ ‘ಚೈತನ್ಯ’ ತುಂಬಿದ BJP ಹೈಕಮಾಂಡ್..!

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಪ್ರಮುಖ ಹುದ್ದೆ ನೀಡಿ ಹೈಕಮಾಂಡ್ ಆದೇಶ ಹೊರಡಿಸಿದೆ. ನೂತನ ಸಂಸದೀಯ ಮಂಡಳಿಯನ್ನು ರಚಿಸಿದ್ದು ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಷ್ಟ್ರಮಟ್ಟದ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದೆ. ಇದರ ಜೊತೆಗೆ ಕೇಂದ್ರ ಚುನಾವಣೆ ಸಮಿತಿಯಲ್ಲೂ ಸ್ಥಾನಮಾನ ನೀಡಿ ರಾಜ್ಯ ಬಿಜೆಪಿಯ ಬಲ ಗಟ್ಟಿಗೊಳಿಸಿದೆ.
ಒಂದು ವರ್ಷಗಳ ಹಿಂದೆ ಮುಖ್ಯಮಂತ್ರಿ ಸ್ಥಾನದಿಂದ ಬಿಎಸ್‌ವೈ ನಿರ್ಗಮಿಸಿದ ನಂತರ ಪಕ್ಷದ ಪ್ರಮುಖ ಚಟುವಟಿಕೆಗಳಿಂದ ದೂರವಿದ್ರು. ಸಹಜವಾಗಿ ಪಕ್ಷದಲ್ಲಿ ಅವರ ಮುಂದಿನ ಸ್ಥಾನಮಾನದ ಬಗ್ಗೆಯೂ ಚರ್ಚೆಗಳಾಗ್ತಿತ್ತು. ಆದ್ರೀಗ, ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡುವ ಮೂಲಕ, ಹೈಕಮಾಂಡ್ ಸದಾ ಬಿ.ಎಸ್.ಯಡಿಯೂರಪ್ಪ ಜೊತೆಗಿದೆ, ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂಬ ಸಂದೇಶವನ್ನು ರವಾನಿಸಿದೆ.

ಬಿಜೆಪಿಯ ನೂತನ ಕೇಂದ್ರೀಯ ಸಂಸದೀಯ ಮಂಡಳಿಯಲ್ಲಿ ಇಬ್ಬರು ಕನ್ನಡಿಗರು ಸ್ಥಾನ‌ ಪಡೆದುಕೊಂಡಂತಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಎರಡು ಅತ್ಯುನ್ನತ ಮಂಡಳಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಆದ್ರೆ, ಕೇಂದ್ರದ ಪ್ರಬಲ ಸಚಿವ ನಿತಿನ್ ಗಡ್ಕರಿ ಬದಲಿಗೆ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಸ್ಥಾನ ಪಡೆದ್ರೆ, ಶಿವರಾಜ್ ಸಿಂಗ್ ಚೌಹಾಣ್‌ ಬದಲು ಸರ್ಬಾನಂದ ಸೊನಾವಾಲ್‌ಗೆ ಅವಕಾಶ ಸಿಕ್ಕಿದೆ. ಈ ಸಮಿತಿ ಬಿಜೆಪಿಯ ಅಂತಿಮ ನೀತಿ ನಿಯಮಗಳನ್ನು ರೂಪಿಸುವ ಅಧಿಕಾರವನ್ನು ಸಂಸದೀಯ ಮಂಡಳಿ ಹೊಂದಿದೆ.

ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮತ್ತು ಆಡಳಿತದ ಬಗ್ಗೆ ಹೈಕಮಾಂಡ್ ಗೆ ಅಸಮಾಧಾನವಿತ್ತು. ಜೊತೆಗೆ ಕಾರ್ಯಕರ್ತರ ಕೆಂಗಣ್ಣಿಗೆ ಬೊಮ್ಮಾಯಿ ಸರ್ಕಾರ ತುತ್ತಾಗಿತ್ತು. ಶಿವಮೊಗ್ಗದ ಚಂದ್ರು, ಮಂಗಳೂರಿನ ಪ್ರವೀಣ್ ನೆಟ್ಟರೂ ಹತ್ಯೆ, ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಉದ್ಭವಿಸಿರುವ ಕೋಮು ಸಂಘರ್ಷ ವಿಕೋಪಕ್ಕೆ ತಲುಪಿತ್ತು. ಇದೆಲ್ಲದಕ್ಕೂ ಕಡಿವಾಣ ಹಾಕಲು ಹೈಕಮಾಂಡ್‌ಗೆ ಪ್ರಬಲ ಅಸ್ತ್ರದ ಅವಶ್ಯಕತೆಯಿತ್ತು.

BSYಗೆ ರಾಷ್ಟ್ರಮಟ್ಟದಲ್ಲಿ ಸ್ಥಾನಮಾನ ಕೊಟ್ಟ ಹೈಕಮಾಂಡ್​​ಗೆ ಬಿ.ಎಸ್‌.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.. ಪ್ರಧಾನಿ ಮೋದಿಗೆ ದೂರವಾಣಿ ಕರೆ ಮಾಡಿ ಖುಷಿ ಹಂಚಿಕೊಂಡಿದ್ದಾರೆ ಮಾಜಿ ಸಿಎಂ.
ಕಾರ್ಯಕರ್ತರ ಮನಸ್ಥಿತಿ ಮತ್ತು ಸದ್ಯ ರಾಜಕೀಯ ಸನ್ನಿವೇಶಗಳನ್ನು ಗಮನದಲ್ಲಿಟ್ಟುಕೊಂಡ ಹೈಕಮಾಂಡ್, ಯಡಿಯೂರಪ್ಪರನ್ನು ಸಂಸದೀಯ ಸ್ಥಾನದ ಮುಂಚೂಣಿಗೆ ತರೋದ್ರಿಂದ ನಾನಾ ರೀತಿಯ ಲಾಭ ಪಕ್ಷಕ್ಕೆ ಆಗಲಿದೆ ಎಂಬ ಸಂದೇಶವನ್ನು ರಾಜ್ಯ ಬಿಜೆಪಿಗೆ ಮತ್ತು ಕಾರ್ಯಕರ್ತರಿಗೆ ರವಾನಿಸಿದೆ. ಸದ್ಯ ಚುನಾವಣೆ ಹೊಸ್ತಿಲಲ್ಲಿರುವ ಬಿಜೆಪಿಗೆ ಯಡಿಯೂರಪ್ಪನವರ ಹೆಸರೇ ಅಂತಿಮ ಹೊರತು, ಬೇರೆ ಅಸ್ತ್ರವಿಲ್ಲದಂತೆ ಕಾಣ್ತಿದೆ. ಆದ್ರೆ, ಈ ಸಂಸದೀಯ ಮಂಡಳಿ ಸ್ಥಾನದಿಂದ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಎಷ್ಟರ ಮಟ್ಟಿಗೆ ಲಾಭವಾಗುತ್ತೆ ಎಂಬ ರಾಜಕೀಯ ಚರ್ಚೆಯನ್ನು ಹುಟ್ಟು ಹಾಕಿದೆ.

ಸಂತೋಷ್ ಹೊಸಹಳ್ಳಿ, ಪವರ್ ಟಿವಿ, ನವದೆಹಲಿ.

RELATED ARTICLES

Related Articles

TRENDING ARTICLES