Monday, December 23, 2024

ಫ್ಲವರ್ ಶೋ ಇತಿಹಾಸದಲ್ಲೇ ಅತಿ ಹೆಚ್ಚು ಜನ ವೀಕ್ಷಣೆ

ಬೆಂಗಳೂರು : ಈ ಬಾರಿಯ ಐತಿಹಾಸಿಕ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ಜೀವಕಳೆ ಬಂದಿತ್ತು. 3 ಶೋ ರದ್ದಾಗಿದ್ರಿಂದ ಪ್ರವಾಸಿಗರು ನಿರಾಶರಾಗಿದ್ರು. ಈ ವರ್ಷ ಸಸ್ಯಕಾಶಿಯಲ್ಲಿ ನಮ್ಮನ್ನಗಲಿಗೆ ರಾಜರತ್ನ ಪುನೀತ್ ರಾಜ್ ಕುಮಾರ್ ಅವರ ಸ್ಮರಣಾರ್ಥವಾಗಿ ಹೂಗಳಲ್ಲಿ ರಾಜ್ ಉತ್ಸವವನ್ನು ಸೃಷ್ಟಿಸಲಾಗಿತ್ತು. ಈ ವರ್ಷದ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಜನರು ಸಾಗರೋಪಾದಿಯಲ್ಲಿ ಹರಿದುಬಂದು ರಾಜ್ ಗತವೈಭವವನ್ನು ಕಣ್ತುಂಬಿಕೊಂಡಿದ್ದಾರೆ.

ಫ್ಲವರ್ ಶೋನ 212 ವರ್ಷಗಳ ಇತಿಹಾಸದಲ್ಲಿ ಅತೀ ಹೆಚ್ಚು ಜನ ಈ ವರ್ಷ ಭಾಗಿಯಾಗಿದ್ದಾರೆ ಹಾಗೂ ದಾಖಲೆಯ ಟಿಕೆಟ್ ಹಣ ಸಂಗ್ರಹವಾಗಿದೆ. 11 ದಿನ ನಡೆದ ವೈಭವದ ಉತ್ಸವದಲ್ಲಿ 8,34,552 ಪ್ರವಾಸಿಗರಿಂದ ಭಾಗಿಯಾಗಿದ್ದಾರೆ, 3,31,90,430 ರೂ ಟಿಕೆಟ್ ಹಣ ಸಂಗ್ರಹವಾಗಿದೆ. ಸ್ವಾತಂತ್ರ್ಯ ದಿನಾಚರಣೆಯಂದೇ 2,99,176 ಪ್ರವಾಸಿಗರು ವೀಕ್ಷಣೆ ಮಾಡಿದ್ದು, 90,50,790 ರೂ. ಸಂಗ್ರಹ ಸಂಗ್ರಹವಾಗಿದೆ.

ಗಾಜಿನಮನೆಯಲ್ಲಿ ಸಿಂಗಾರಕ್ಕೆ ಖರ್ಚಾಗಿದ್ದು ಅಂದಾಜು 2 ಕೋಟಿ.. ಆದಾಯ ಬಂದಿರೋದು 3.22 ಕೋಟಿ. 1 ಕೋಟಿಗೂ ಹೆಚ್ಚು ಲಾಭ ಬಂದಿದೆ. ಬಂದ ಲಾಭವನ್ನು ಪುನೀತ್ ಆಶಯದಂತೆ ಸಮಾಜಸೇವೆಗೆ ಬಳಸುವುದಾಗಿ ಸಚಿವ ಮುನಿರತ್ನ ತಿಳಿಸಿದ್ದರು. ಸದ್ಯ ಕಲೆಕ್ಟ್ ಆಗಿರೋ ಹಣವೆಲ್ಲಾ ಮೈಸೂರು ಉದ್ಯಾನ ಸಂಘದ ಬಳಿಯಿದ್ದು ಮುಂದಿನವಾರ ನಡೆಯುವ ಮೀಟಿಂಗ್​ನಲ್ಲಿ ಬಂದ ಲಾಭವನ್ನು ಯಾವ ರೀತಿ ಸಮಾಜಸೇವೆಗೆ ಕೊಡಬೇಕು ಎಂಬುದನ್ನು ನಿರ್ಧರಿಸಲಾಗುವುದು.

11 ದಿನಗಳ ಅದ್ದೂರಿ ರಾಜ್ ಉತ್ಸವವನ್ನು ಲಾಲ್ ಬಾಗ್ ತೋಟಗಾರಿಕಾ ಇಲಾಖೆ ಯಾವುದೇ ಸಮಸ್ಯೆ ಇಲ್ಲದೆ ಅಚ್ಚುಕಟ್ಟಾಗಿ ಮುಗಿಸಿದೆ. 8 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದು ಶೋ ಮುಗಿದ್ರೂ ಪ್ರವಾಸಿಗರು ಗಾಜಿನ ಮನೆಯತ್ತ ಬರ್ತಿದ್ದಾರೆ. ಇಷ್ಟು ಬೇಗ ಫ್ಲವರ್ ಶೋ ಮುಗಿದೋಯ್ತಲ್ಲ ಮತ್ತಷ್ಟು ದಿನ ಮುಂದುವರಿಸಬಾರದಿತ್ತಾ ಎನ್ನುತ್ತಿದ್ದಾರೆ ಪುನೀತ್ ಅಭಿಮಾನಿಗಳು.

ಸ್ವಾತಿ ಪುಲಗಂಟಿ, ಮೆಟ್ರೋ ಬ್ಯುರೋ, ಬೆಂಗಳೂರು

RELATED ARTICLES

Related Articles

TRENDING ARTICLES