ಬೆಂಗಳೂರು : ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿರುವ ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ಮಾಡೋದಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಕಂದಾಯ ಇಲಾಖೆಯಿಂದ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮೈದಾನದ ಸುತ್ತಮುತ್ತ ಹೈಅಲರ್ಟ್ ಮಾಡಲಾಗಿದೆ. ವಿವಾದಿತ ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಜೊತೆಗೆ ಸಾರ್ವಜನಿಕರಿಗೆ ಅಭಯ ನೀಡುವ ನಿಟ್ಟಿನಲ್ಲಿ ಚಾಮರಾಜಪೇಟೆ ಮೈದಾನ ಸುತ್ತಮುತ್ತಲಿನ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪರೇಡ್ ನಡೆಸಿದ್ದಾರೆ.ಪಶ್ಚಿಮ ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ನಡೆದ ಪರೇಡ್‌ನಲ್ಲಿ ಪಶ್ಚಿಮ ವಿಭಾಗದ ಎಲ್ಲಾ ಠಾಣೆಯ 250ಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ರು. ಚಾಮರಾಜಪೇಟೆ ಆಟದ ಮೈದಾನದಿಂದ ಆರಂಭವಾದ ಪರೇಡ್ ಮೈಸೂರು ರೋಡ್, ಆನಂದಪುರ, ಟಿಪ್ಪುನಗರ, ಬಾಬಾಲೈನ್,ರಾಯನ್ ಸರ್ಕಲ್, ಚಾಮರಾಜಪೇಟೆ ಸರ್ಕಲ್ ಸುತ್ತ ಹೊರಟಿತು. ವಿವಾದಿತ ಜಾಗದಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ನಡೆಯುತ್ತಿರೋ ಕಾರಣ ಪೊಲೀಸರು ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ.
ವಿವಾದಿತ ಮೈದಾನದಲ್ಲಿ ಕಂದಾಯ ಇಲಾಖೆ ಸೋಮವಾರ ಬೆಳಗ್ಗೆ ಕಂದಾಯ ಇಲಾಖೆ ಎಸಿ ಧ್ವಜಾರೋಹಣ ಮಾಡ್ತಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಮೈದಾನದಲ್ಲಿ ಭಾರಿ ಭದ್ರತೆ ನೀಡಲಾಗಿದೆ. ಸ್ವಾತಂತ್ರ್ಯೋತ್ಸವಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ಆಗಿವೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಮೈದಾನದಲ್ಲಿ ಶಾಂತಿ ಕಾಪಾಡಲು ಎರಡು ಧರ್ಮದ ಮುಖಂಡರ ಜೊತೆ ಸಭೆ ಮಾಡಲಾಗಿದೆ. ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ಎಚ್ಚರಿಸಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಗೂ ಎಲ್ಲ ಸಿದ್ದತೆ ಆಗಿದ್ದು, ಅಗತ್ಯ ಇದ್ದಲ್ಲಿ ಮತ್ತೊಮ್ಮೆ ಶಾಂತಿ ಸಭೆ ಮಾಡುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಇನ್ನು ಪೊಲೀಸರ ಪರೇಡ್ ಮುಕ್ತಾಯದ ಬೆನ್ನಲ್ಲೇ ಮೈದಾನಕ್ಕೆ ಕಂದಾಯ ಇಲಾಖೆ ಉತ್ತರ ಉಪವಿಭಾಗಾಧಿಕಾರಿ ಶಿವಣ್ಣ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ರು. ಸ್ವಾತಂತ್ರ್ಯ ದಿನದ ಕಾರ್ಯಕ್ರಮದ ರೂಪುರೇಷೆ, ತಯಾರಿ ಮತ್ತು ಭದ್ರತೆ ಹೇಗೆ ಎಂಬ ವಿಚಾರಕ್ಕೆ ಸಂಬಂಧಿಸಿ ಸ್ಥಳೀಯ ಎಸಿಪಿ ಗಿರಿ ಮತ್ತು ಇನ್ಸ್‌ಪೆಕ್ಟರ್ ಎರ್ರಿಸ್ವಾಮಿ ಬಳಿ ಮಾಹಿತಿ ಪಡೆದರು.
ಒಟ್ಟಾರೆ ಚಾಮರಾಜಪೇಟೆ ಮೈದಾನದಲ್ಲಿ ಪೊಲೀಸ್ ಸರ್ಪಗಾವಲಿನಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ಭರದ ಸಿದ್ದತೆ ನಡೆದಿದೆ.ಯಾವುದೇ ಅಹಿತರ ಘಟನೆಗಳಿಗೆ ಅವಕಾಶ ನೀಡದಂತೆ ಇನ್ನಷ್ಟು ಎಚ್ಚರಿಕೆಯಿಂದ ಕಾರ್ಯಕ್ರಮ ಯಶಸ್ವಿಗೊಳಿಸುವ ವಿಶ್ವಾಸದಲ್ಲಿ ಪೊಲೀಸ್ ಇಲಾಖೆ ಕೂಡ ಇದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು