Monday, December 23, 2024

ಹಿಂದಿವಾಲಾಗಳಿಗೆ ಕರುನಾಡ ಕಿಚ್ಚ ಅದ್ಭುತ ಕನ್ನಡ ಪಾಠ..!

ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಇತ್ತೀಚೆಗೆ ಪಾನ್ ಇಂಡಿಯಾ ಸ್ಟಾರ್ ಅಜಯ್ ದೇವಗನ್​ಗೆ ಕನ್ನಡದ ಪಾಠ ಮಾಡಿದ್ರು. ಆ ಮೂಲಕ ಕನ್ನಡಿಗರ ಗತ್ತು ಇಡೀ ಇಂಡಿಯಾಗೆ ಗೊತ್ತು ಮಾಡಿದ್ರು. ಇದೀಗ ಮತ್ತಷ್ಟು ಮಂದಿ ಹಿಂದಿವಾಲಾಗಳಿಗೆ ಕನ್ನಡವನ್ನು ಸಾರಿದ್ದಾರೆ. ಇದ್ರಿಂದ ಅವ್ರಿಗೆ ರಾಜ್ಯದ ಮೂಲೆ ಮೂಲೆಯಿಂದ ಪ್ರಶಂಸೆಯ ಸುರಿಮಳೆ ಆಗ್ತಿದೆ.

  • ಕನ್ನಡ್ ಅಂದವ್ರಿಗೆ ಸ್ಪಷ್ಟವಾಗಿ ಕನ್ನಡ ಹೇಳಿಕೊಟ್ಟ ಮಾಣಿಕ್ಯ
  • ಅಂದು ಪಾನ್ ಸ್ಟಾರ್ ಅಜಯ್​ ದೇವಗನ್​ಗೆ ಮುಖಭಂಗ
  • KGF, ಚಾರ್ಲಿ ಸಾಲಿಗೆ ವಿಕ್ರಾಂತ್ ರೋಣ ಕನ್ನಡ ಡಿಂಡಿಮ

ಗಾಡ್ ಫಾದರ್ ಇಲ್ಲದೆ, ಒಬ್ಬ ಕಲಾವಿದ ಇಂಡಸ್ಟ್ರಿಗೆ ಕಾಲಿಟ್ರೆ ಆತನಿಗೆ ಐರನ್ ಲೆಗ್ ಪಟ್ಟ ಕಟ್ಟುತ್ತಾರೆ. ಆದ್ರೆ ಛಲಬಿಡದೆ ಇಟ್ಟ ಗುರಿಯತ್ತ ದಿಟ್ಟ ಹೆಜ್ಜೆ ಇಟ್ಟು ಸಾಗಿದ ಆತ ಇಂದು ಆಲ್ ಇಂಡಿಯಾ ಕಟೌಟ್. ದೇಶ ವಿದೇಶಗಳಲ್ಲಿ ಛಾಪು ಮೂಡಿಸಿರೋ ಕನ್ನಡದ ರಾಯಭಾರಿ. ಪರಭಾಷಾ ಮಂದಿಯಿಂದ ರೆಡ್ ಕಾರ್ಪೆಟ್ ಹಾಕಿಸಿಕೊಂಡ ಕರುನಾಡ ಮಾಣಿಕ್ಯ, ರನ್ನ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್.

ಇವ್ರು ಸ್ಟಾರ್ ಆಗಿ, ಸೂಪರ್ ಸ್ಟಾರ್ ಆಗಿ ತಮ್ಮ ಸಂಭಾವನೆ ಅಥ್ವಾ ಸಿನಿಮಾಗಳ ಸಂಖ್ಯೆಯ ಜೊತೆ ಅಭಿಮಾನಿ ಬಳಗವನ್ನು ಮಾತ್ರ ಹೆಚ್ಚಿಸಿಕೊಂಡಿಲ್ಲ. ಅದರೊಟ್ಟಿಗೆ ಪರೋಕ್ಷವಾಗಿ ಕನ್ನಡತನವನ್ನು, ಕರುನಾಡಿನ ಕೀರ್ತಿ ಪತಾಕೆಯನ್ನ ದೇಶದ ಮೂಲೆ ಮೂಲೆಯಲ್ಲಿ ಹಾರಿಸೋ ಕಾರ್ಯ ಮಾಡಿದ್ದಾರೆ. ಅರ್ಥಾತ್ ಕನ್ನಡ ಭಾಷೆಯ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

ಸದ್ಯ ಕಿಚ್ಚ ಸುದೀಪ್ ನಮ್ಮ ಕನ್ನಡಿಗರಿಗಷ್ಟೇ ಸ್ವಂತ ಅಲ್ಲ. ಭಾರತೀಯ ಚಿತ್ರರಂಗದ ಸ್ವತ್ತು. ಅದು ಅವ್ರ ನಟನಾ ಗಮ್ಮತ್ತು ತಿಳಿದವ್ರಿಗೆ ಮಾತ್ರ ಗೊತ್ತು. ಸೂಪರ್ ಸ್ಟಾರ್ಸ್​, ಮೆಗಾ ಸ್ಟಾರ್ಸ್​ ಜೊತೆಗೆಲ್ಲಾ ಉತ್ತಮ ಒಡನಾಟ, ಬಾಂಧವ್ಯ ಹೊಂದೋದು ನಿಜಕ್ಕೂ ಕಷ್ಟಸಾಧ್ಯ. ಅಲ್ಲದೆ, ಕ್ರಿಕೆಟ್ ಲೋಕದ ದಿಗ್ಗಜರ ಜೊತೆಗೂ ಇವ್ರ ನಂಟು ಬಲು ಜೋರಿದೆ. ಇನ್ನು ಕನ್ನಡ ಭಾಷೆ, ನೆಲ, ಜಲ ವಿಚಾರಕ್ಕೆ ಬಂದ್ರೆ ಇವ್ರು ಮದಕರಿ ನಾಯಕನೇ ಆಗ್ತಾರೆ.

ರೀಸೆಂಟ್ ಆಗಿ ಹಿಂದಿಯನ್ನ ರಾಷ್ಟ್ರಭಾಷೆ ಅಂತ ಹೇಳಿ ನಗೆಪಾಟಲಿಗೆ ಈಡಾಗಿದ್ದ ಬಾಲಿವುಡ್​ನ ಪಾನ್ ಸ್ಟಾರ್ ಅಜಯ್ ದೇವಗನ್​ಗೆ ಕನ್ನಡ ಪಾಠ ಮಾಡಿದ್ರು ಕಿಚ್ಚ ಸುದೀಪ್. ಆ ವಿಚಾರ ಇಡೀ ದೇಶಾದ್ಯಂತ ಸಂಚಲನ ಕೂಡ ಮೂಡಿಸಿತ್ತು. ಪಾನ್ ಮಸಾಲ ಌಡ್ ಮಾಡೋ ದೇವಗನ್​ಗೆ ತಲೆ ಮೇಲೆ ಹೊಡೆದಂತೆ ಪ್ರತಿಕ್ರಿಯೆ ನೀಡಿದ ಕಿಚ್ಚನಿಗೆ ಎಲ್ಲೆಡೆಯಿಂದ ಉತ್ತಮ ಪ್ರಶಂಸೆ ಹಾಗೂ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಇದೀಗ ಮತ್ತೊಮ್ಮೆ ಒಂದಷ್ಟು ಹಿಂದಿವಾಲಾಗಳಿಗೆ ಕನ್ನಡ ಪಾಠ ಮಾಡಿದ್ದಾರೆ ನಮ್ಮ ಬಾದ್​ಷಾ ಕಿಚ್ಚ.

ಯೆಸ್.. ವಿಕ್ರಾಂತ್ ರೋಣ ಚಿತ್ರದ ಪ್ರೊಮೋಷನ್ಸ್ ವಿಚಾರ ಹಿಂದಿ ಮಂದಿ ಕಿಚ್ಚನೊಟ್ಟಿಗೆ ಕೂತು ಮಾತನಾಡುವಾಗ ಕನ್ನಡ್ ಅಂತ ಉಚ್ಚರಣೆ ಮಾಡಿದ್ರು. ಆಗ ಅದು ಕನ್ನಡ್ ಅಲ್ಲ, ಕನ್ನಡ ಅಂತ ಸ್ಪಷ್ಟಪಡಿಸೋದ್ರ ಜೊತೆಗೆ ಅವ್ರ ತಪ್ಪನ್ನ ಸರಿಪಡಿಸಿದ್ರು ಸುದೀಪ್. ಆ ವಿಡಿಯೋಗಳು ಸದ್ಯ ಸೋಶಿಯಲ್ ಮೀಡಿಯಾದ ವಿವಿಧ ಪ್ಲಾಟ್​ಫಾರ್ಮ್​ಗಳಲ್ಲಿ ವೈರಲ್ ಆಗ್ತಿದ್ದು, ಕಿಚ್ಚನ ಕನ್ನಡಾಭಿಮಾನ ಟಾಕ್ ಅಫ್ ದಿ ಟೌನ್ ಆಗಿದೆ.

ಅಂದಹಾಗೆ ಕೆಜಿಎಫ್, ಚಾರ್ಲಿ ಸಿನಿಮಾಗಳ ಬಳಿಕ ಸುದೀಪ್​ರ ವಿಕ್ರಾಂತ್ ರೋಣ ತನ್ನ ಯುನಿಕ್ ಮೇಕಿಂಗ್ ಪ್ಯಾಟ್ರನ್ ಹಾಗೂ ಕಥೆಯಿಂದ ಭಾರತೀಯ ಚಿತ್ರರಂಗದಲ್ಲಿ ಒಂದೊಳ್ಳೆ ಟ್ರೆಂಡ್​ಸೆಟ್ ಮಾಡಿದೆ. ಎರಡೇ ದಿನದಲ್ಲಿ 50 ಕೋಟಿ ಗಳಿಸಿದ ಈ ಚಿತ್ರ ನೂರುಕೋಟಿ ಕ್ಲಬ್ ಸೇರಿದೆ. ಪರಭಾಷೆಗಳಿಂದ ಉತ್ತಮ ರೆಸ್ಪಾನ್ಸ್ ಬರ್ತಿದ್ದು, ಕನ್ನಡದ ಘನತೆ, ಗೌರವ ಮತ್ತಷ್ಟು ಹೆಚ್ಚಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES