ಬೆಂಗಳೂರು: ಜನ ಯಾರನ್ನ ಇಷ್ಟ ಪಡ್ತಾರೆ, ಜನರೇ ಅವರನ್ನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ಗೆ ಕಂದಾಯ ಸಚಿವ ಆರ್ ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ಇಂದುಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಒಳಗಿರೋ ವೈಮನಸ್ಸುಗಳಿಂದ ವಿರೋಧ ಪಕ್ಷದವರಾದ ಸಿದ್ದರಾಮಯ್ಯ, ಡಿಕೆಶಿ, ಪರಮೇಶ್ವರ್, ಖರ್ಗೆ, ಎಂ.ಬಿ ಪಾಟೀಲ್ ಎಲ್ಲರೂ ಒಂದೊಂದು ಜಾತಿ ಇಟ್ಟುಕೊಂಡು ಹೋಗ್ತಿದ್ದಾರೆ. ಹಾಗಾದ್ರೆ ಜಾತಿಗೆ ಬೆಲೆ ಇಲ್ವಾ.?ಎಂದು ಕಾಂಗ್ರೆಸ್ ನಾಯಕರ ವಿರುದ್ದ ಕಿಡಿಕಾಡಿದ್ದಾರೆ.
ಇನ್ನು ಒಕ್ಕಲಿಗ ಜಾತಿ ಬಗ್ಗೆ ಮಾತಾಡ್ತಾರೆ, ನಾನೂ ಒಬ್ಬ ಒಕ್ಕಲಿಗ. ನಮ್ಮ ಸಮಾಜಕ್ಕೆ ಬೆಲೆ ಇಲ್ವಾ.? ಕೆಂಪೇಗೌಡರು, ಕುವೆಂಪು ಅವರು ಎಂದೂ ಜಾತಿ ಮಾಡಲಿಲ್ಲ. ಕೆಂಪೇಗೌಡರು ಎಲ್ಲಾ ಜಾತಿಗೋಸ್ಕರ ಪೇಟೆ ಮಾಡಿದ್ದಾರೆ, ಕುವೆಂಪು ವಿಶ್ವಮಾನವ ಆದರು. ಕಾಂಗ್ರೆಸ್ ಈ ರೀತಿ ಜಾತಿ ಅಡ್ಡ ತರೋದನ್ನ ನಿಲ್ಲಿಸಲಿ ಎಂದು ಗುಡುಗಿದರು.
ಅಲ್ಲದೇ ಲಿಂಗಾಯತ, ಗೌಡ, ಎಸ್ಸಿ, ಎಸ್ಟಿ ಅಂತ ಜಾತಿ ತರೋದು ಬೇಡ. ಜನ ಯಾರನ್ನ ಇಷ್ಟ ಪಡ್ತಾರೆ, ಜನರೇ ಅವರನ್ನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುತ್ತಾರೆ. ಜಾತಿಗೊಬ್ಬ ಸಿಎಂ ಮಾಡಲು ಸಾಧ್ಯವಿಲ್ಲ. ಭಾರತದ ಸಂವಿಧಾನ ಅಡಿಯಲ್ಲಿ ಸಿಎಂ ಆಯ್ಕೆ ಆಗ್ತಾರೆ. ಹೀಗಾಗಿ ಒಕ್ಕಲಿಗರ ವಿಚಾರದಲ್ಲಿ ಲಕ್ಷ್ಮಣ ರೇಖೆ ದಾಟಬೇಡಿ ಎಂದು ಪರೋಕ್ಷವಾಗಿ ಡಿಕೆಶಿಗೆ ವಾರ್ನಿಂಗ್ ನೀಡಿದರು.