Friday, May 17, 2024

ವರುಣನ ಧರೆಗಿಳಿಸಲು ಗೊಂಬೆಗಳಿಗೆ ಮದುವೆ

ಗದಗ: ನಾವೆಲ್ಲ ಬರ ಬಂದಾಗ ಮಳೆ ಬರ್ಲಿ ಅಂತ ಕಪ್ಪೆಗೆ, ಕತ್ತೆಗೆ ಮದುವೆ ಮಾಡಿಸೋದನ್ನ ನೋಡಿದ್ದೀವಿ, ಕೇಳಿದ್ದೀವಿ. ಆದ್ರೆ ಇದು ತುಂಬಾ ವಿಶೇಷವಾದ ಮದುವೆ. ಈ ವಿಶೇಷ ಮದುವೆಯ ಜೋಡಿ ನೋಡಿದ್ರೆ ಅಚ್ಚರಿಪಡ್ತೀರಿ. ಈ ಜೋಡಿ ನೋಡೋಕೆ ನೀವು ಕಾಯ್ತಾ ಇದೀರಾ? ಹಾಗಾದ್ರೆ ನಿಮಗೂ ಈ ಜೋಡಿ ಮದುವೆ ತೋರಿಸ್ತೀವಿ ನೋಡಿ.

ಮದುವೆ ಅಂದ್ರೆ ಸುಮ್ನೆನಾ…ಮನೆ ತುಂಬಾ ಜನ, ಸೋಬಾನೆ ಹಾಡೋ ಅಜ್ಜಿಯರು, ಬಳೆ ಸದ್ದು ಮಾಡಿಕೊಂಡು ಓಡಾಡುವ ಮುತ್ತೈದೆಯರು, ಕಿಲಕಿಲ ಅಂತ ನಕ್ಕೊಂಡು ಆಟ ಆಡುವ ಮಕ್ಕಳು… ಇವೆಲ್ಲಾ ಇದ್ರೇನೆ ಮದುವೆ ಸಂಭ್ರಮ ಅನಿಸೋದು. ಇದು ಕೂಡ ಹಾಗೇ.. ಒಂದು ಕಡೆ ಹೆಣ್ಣಿನ ಸಂಬಂಧಿಗಳಾಗಿ ಗಂಗೆ ಪೂಜೆ. ಇನ್ನೊಂದು ಕಡೆ ಅರಿಶಿಣ ಶಾಸ್ತ್ರ, ಸುರುಗಿಕಾರ್ಯ, ಹಾಲುಗಂಬ ತರುವುದು, ಮಾಂಗಲ್ಯ ಧಾರಣೆ….. ವಾಹ್​​.. ಎಷ್ಟೊಂದು ಸಂಭ್ರಮ ಅಲ್ವಾ!

ಇದು ಗೊಂಬೆಗಳ ಮದುವೆ. ಈ ಮದುವೆಗೆ ಸಾಕ್ಷಿಯಾಗಿದ್ದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮ್ಯಾಗೇರಿ ಓಣಿಯ ಜನತೆ. ಗದಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಈಗಾಗಲೇ ಮುಂಗಾರಿನ ಮಳೆ ಸುರಿದು ಕೆಲವು ಭಾಗಗಳಲ್ಲಿ ಬಿತ್ತನೆ ಕಾರ್ಯವೂ ಸಹ ಮುಗಿದಿವೆ. ಆದ್ರೆ ಜಿಲ್ಲೆಯ ಲಕ್ಷ್ಮೇಶ್ವರ, ಶಿರಹಟ್ಟಿ, ಬೆಳ್ಳಟ್ಟಿ ಭಾಗಗಳಲ್ಲಿ ಮಳೆಯಾಗದೆ ರೈತರು ಚಿಂತೆಗೀಡಾಗಿದ್ದಾರೆ. ಹೀಗಾಗಿ ಈ ರೀತಿ ವರುಣದೇವ ಮುನಿಸಿಕೊಂಡಾಗ, ಮಳೆರಾಯನ ಆಗಮನಕ್ಕಾಗಿ ಗ್ರಾಮೀಣ ಭಾಗಗಳಲ್ಲಿ ಇಂದಿಗೂ ವಿಶಿಷ್ಟ ಆಚರಣೆ, ಸಂಪ್ರದಾಯಗಳು ನಡೆಯುತ್ತವೆ. ಅಂತದೇ ಆಚರಣೆಗಳಲ್ಲಿ ಗೊಂಬೆಗಳ ಮದುವೆ ಕೂಡ ಒಂದು.

ಇನ್ನು ಸ್ಥಳೀಯ ಪುರೋಹಿತರ ನೇತೃತ್ವದಲ್ಲಿ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಗೊಂಬೆ ಸ್ವರೂಪದ ವಧು ವರರನ್ನು ಕೂರಿಸಿ ಕನ್ಯಾದಾನ ಮಾಡಿ ಮಾಂಗಲ್ಯ ಧಾರಣೆ ಮಾಡಿಸಿದರು. ಮಳೆಗಾಗಿ ಈ ಪದ್ದತಿಯನ್ನು ಹಲವಾರು ವರ್ಷಗಳಿಂದ ನಮ್ಮ ಹಿರಿಯರು ಮಾಡುತ್ತಾ ಬಂದಿದ್ದು, ಈ ಆಚರಣೆ ಮಾಡಿದ ನಂತ್ರ ಮಳೆಯ‌ ಆಗಮನ ಖಚಿತ ಅನ್ನೋದು ಗ್ರಾಮಸ್ಥರ ನಂಬಿಕೆಯಾಗಿದೆ.

ಒಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಕೂಡ ಮಳೆಗಾಗಿ ಇಂತಹ ಸಂಪ್ರದಾಯಗಳನ್ನು ಆಚರಿಸುತ್ತಿರುವುದು ಈ ನೆಲದ ಸೊಗಡು, ವೈಶಿಷ್ಟ್ಯತೆಗೆ ಸಾಕ್ಷಿಯಾಗಿದೆ.

ಮಹಾಲಿಂಗೇಶ್ ಹಿರೇಮಠ, ಪವರ್ ಟಿವಿ, ಗದಗ

RELATED ARTICLES

Related Articles

TRENDING ARTICLES