Friday, May 17, 2024

ಬಳ್ಳಾರಿಗೂ ರಾಜರತ್ನಗೂ ಇತ್ತು ಅವಿನಾಭಾವ ಸಂಬಂಧ

ನಟಸಾರ್ವಭೌಮ ಡಾ. ರಾಜ್​ಕುಮಾರ್ ಕರುನಾಡಿನ ಪಾಲಿಗೆ ದೇವತಾ ಮನುಷ್ಯನಾದ್ರೆ, ರಾಜರತ್ನ ಅಪ್ಪು ಮಾತ್ರ ಅಕ್ಷರಶಃ ದೇವರೇ ಆಗಿಬಿಟ್ರು. ಅವ್ರ ಆದರ್ಶಗಳು ಅಭಿಮಾನಿಗಳ ಪಾಲಿಗೆ ಶಾಸನಗಳಾದವು. ಪುಣ್ಯಭೂಮಿ ದೇವಾಲಯ ಆಯ್ತು. ಸದ್ಯ ಹೊಸಪೇಟೆಯಲ್ಲಿ ನಡೆದ ಪುತ್ಥಳಿ ಅನಾವರಣ ಕಾರ್ಯಕ್ರಮ, ಅಭಿಮಾನಿ ಸಾಗರದಿಂದ ಅಭಿಮಾನವನ್ನು ಮುಗಿಲು ಮುಟ್ಟಿಸಿತು.

  • ಅಣ್ಣಾವ್ರು ದೇವತಾ ಮನುಷ್ಯ.. ದೇವರೇ ಆಗಿಬಿಟ್ರು ಅಪ್ಪು
  • ಹೊಸಪೇಟೆಯಲ್ಲಿ ಅಪ್ಪುವಿನ 7.4 ಅಡಿ ಕಂಚಿನ ಪುತ್ಥಳಿ..!
  • ಲಕ್ಷಾಂತರ ಅಭಿಮಾನಿ ದೇವರುಗಳ ಸಮಾಗಮಕ್ಕೆ ಸಾಕ್ಷಿ
  • ಬಳ್ಳಾರಿಗೂ ರಾಜರತ್ನಗೂ ಇತ್ತು ಅವಿನಾಭಾವ ಸಂಬಂಧ

ಆಡು ಮುಟ್ಟದ ಸೊಪ್ಪಿಲ್ಲ.. ಅಣ್ಣಾವ್ರು ಮಾಡದ ಪಾತ್ರವಿಲ್ಲ ಅನ್ನೋ ಮಾತಿತ್ತು. ಅದ್ರಂತೆ ನಟಸಾರ್ವಭೌಮ ಡಾ. ರಾಜ್​ಕುಮಾರ್ ಎಲ್ಲ ಜಾನರ್ ಸಿನಿಮಾಗಳಿಂದ ಜನರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿಬಿಟ್ರು. ಅದ್ರಲ್ಲೂ ಸಾಮಾಜಿಕ ಕಳಕಳಿಯ ಕೌಟುಂಬಿಕ ಸಿನಿಮಾಗಳಿಂದ, ನಾಡು- ನುಡಿ- ಜಲಕ್ಕಾಗಿ ನಡೆಸಿದ ಗೋಕಾಕ್ ಚಳವಳಿಯಿಂದ ದೇವತಾ ಮನುಷ್ಯನಾದ್ರು.

ತಂದೆಯ ಹಾದಿಯಲ್ಲೇ ಸಾಗಿದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಕೂಡ ಅಣ್ಣಾವ್ರ ಆದರ್ಶಗಳು, ನಡೆ, ನುಡಿ, ಸಂಸ್ಕಾರ, ಸಮಾಜಮುಖಿ ಕೆಲಸಗಳನ್ನ ಮುಂದುವರೆಸಿದ್ರು. ಸಣ್ಣ ವಯಸ್ಸಿನಲ್ಲೇ ಎಲ್ಲರ ಮನಮುಟ್ಟಿದ ಅಪ್ಪು, ಪವರ್ ಸ್ಟಾರ್ ಆಗಿ ಚಿತ್ರರಂಗದ ಪವರ್ ಹೆಚ್ಚಿಸಿದ್ರು. ಆದ್ರೆ ವಿಧಿಯ ಕೈವಾಡ ಬಾರದೂರಿಗೆ ಬಹುಬೇಗ ಪಯಣ ಬೆಳೆಸಿಬಿಟ್ರು. ಬರೀ ಫ್ಯಾನ್ಸ್ ಅಷ್ಟೇ ಅಲ್ಲ, ಇಡೀ ಕರುನಾಡೇ ಅವ್ರ ಅಗಲಿಕೆಗೆ ಕಣ್ಣೀರ ಕೋಡಿ ಹರಿಸಿತು. ಮಮ್ಮಲ ಮರಗಿತು.

ಅಭಿಮಾನಿಗಳನ್ನು ಅಭಿಮಾನಿ ದೇವರುಗಳು ಅಂತ ಕರೆದ ದೊಡ್ಮನೆ, ಅಕ್ಷರಶಃ ಅವ್ರ ಮನದಲ್ಲಿ ದೇವರಂತೆ ಉಳಿದುಬಿಟ್ರು ಪುನೀತ್. ಕಾರಣ ಅವ್ರ ಸಮಾಜಮುಖಿ ಕೆಲಸಗಳು. ಅವ್ರ ಪುಣ್ಯಭೂಮಿ ಅಭಿಮಾನಿ ದೇವ್ರ ಪಾದಸ್ಪರ್ಶದಿಂದ ದೇವಾಲಯವಾಗಿ ಮಾರ್ಪಟ್ಟಿದೆ. ಪ್ರತೀ ದಿನ ಸಹಸ್ರಾರು ಮಂದಿ ಬಂದು ಸಮಾಧಿಗೆ ನಮಸ್ಕರಿಸಿ ಹೋಗ್ತಾರೆ.

ಇದೀಗ ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಪುನೀತ್ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಲಕ್ಷಾಂತರ ಮಂದಿ ಅಭಿಮಾನಿ ಸಾಗರಕ್ಕೆ ಸಾಕ್ಷಿ ಆಗಿದ್ದು ವಿಶೇಷ. ಹೌದು.. ಭಾನುವಾರ ಸಂಜೆ ಹೊಸಪೇಟೆಯಲ್ಲಿ ಅಪ್ಪುವಿನ 7.4 ಅಡಿ ಕಂಚಿನ ಪುತ್ಥಳಿಯನ್ನ ಅನಾವರಣ ಮಾಡಲಾಯ್ತು. ಅಲ್ಲಿ ನೆರೆದಿದ್ದ ಜನರನ್ನ ನೋಡಿದ್ರೆ ಇದು ಜಾತ್ರೆಯೋ ಮತ್ತಿನ್ನೇನೋ ಅನ್ನೋ ಅನ್ನುವ ರೇಂಜ್​ಗೆ ಕಿಕ್ಕಿರಿದು ತುಂಬಿದ್ರು ದೊಡ್ಮನೆ ಅಭಿಮಾನಿಗಳು. ಇನ್ನು ಅದಕ್ಕೆ ರಾಘವೇಂದ್ರ ರಾಜ್​ಕುಮಾರ್ ಕುಟುಂಬ ಹಾಗೂ ರಾಜಕುಮಾರ ಚಿತ್ರದ ಡೈರೆಕ್ಟರ್ ಸಂತೋಷ್ ಆನಂದ್​ರಾಮ್ ಕೂಡ ಸಾಕ್ಷಿ ಆಗಿದ್ದು ಮತ್ತೊಂದು ವಿಶೇಷ.

ಬಳ್ಳಾರಿ, ಹೊಸಪೇಟೆಗೂ ನಮ್ಮ ಯುವರತ್ನ ಅಪ್ಪುಗೂ ಅವಿನಾಭಾವ ಸಂಬಂಧವಿದೆ. ಅವ್ರ ಬಹುತೇಕ ಎಲ್ಲಾ ಸಿನಿಮಾಗಳ ಒಂದಿಲ್ಲೊಂದು ಸೀನ್ ಬಳ್ಳಾರಿ ಭಾಗದಲ್ಲಿ ಚಿತ್ರೀಕರಣ ಆಗ್ತಾನೇ ಇತ್ತು. ಪುನೀತ್​ ರಾಜ್​ಕುಮಾರ್ ಅವ್ರಿಗೂ ಅಲ್ಲಿನ ಜನ, ಭಾಷೆ, ಊಟ, ಸಂಸ್ಕಾರ ಬಹಳಷ್ಟು ಇಷ್ಟವಾಗಿತ್ತು. ಹಾಗಾಗಿಯೇ ಬಳ್ಳಾರಿಯ ಜೊತೆ ವಿಶೇಷ ನಂಟು ಹೊಂದಿದ್ರು ಅಪ್ಪು. ರಣ ವಿಕ್ರಮ, ನಟಸಾರ್ವಭೌಮ, ಪೃಥ್ವಿ, ಯುವರತ್ನ, ಜೇಮ್ಸ್, ದೊಡ್ಮನೆ ಹುಡ್ಗ ಹೀಗೆ ಸಾಕಷ್ಟು ಸಿನಿಮಾಗಳ ಸೀನ್​ಗಳು ಇಂದಿಗೂ ಬಳ್ಳಾರಿಯನ್ನ ನೆನಪಿಸುತ್ತವೆ.

ಅದೇನೇ ಇರಲಿ, ಅಪ್ಪು ಅಂದ್ರೆ ಬರೀ ವ್ಯಕ್ತಿ ಅಲ್ಲ. ಅದೊಂದು ಅತ್ಯದ್ಭುತ ವ್ಯಕ್ತಿತ್ವ. ಯುವಕರ ಪಾಲಿನ ಸ್ಫೂರ್ತಿಯ ಚಿಲುಮೆ. ಭವಿಷ್ಯದ ನಡೆ- ನುಡಿಯ ಪ್ರತೀಕ ಅನ್ನೋದು ಎಲ್ಲರಿಗೂ ಮನದಟ್ಟಾಯ್ತು. ಅಪ್ಪು ಜೀವಂತವಾಗಿ ಇಲ್ಲವಾದ್ರೂ, ಕನ್ನಡಿಗರ ಮನದಲ್ಲಿ ಅಜರಾಮರ. ಬೆಲೆ ಕಟ್ಟಲಾಗದ ಬೆಟ್ಟದ ಹೂವಿಗೆ ಸಾವಿರ ಶರಣು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES