ವಿಜಯಪುರ: ಚಿಕಿತ್ಸೆ ನೀಡಲು ವೈದ್ಯರಿಲ್ಲದೇ ಗರ್ಭಿಣಿ ನರಳಾಡಿದ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಜಿಗಜಿವಣಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಇನ್ನು, ಕೇವಲ ಆಸ್ಪತ್ರೆ ಸಿಬ್ಬಂದಿಯವರು ಬಿಪಿ ತಪಾಸಣೆ ನಡೆಸಿ, ಚಡಚಣ ಅಥವಾ ವಿಜಯಪುರ ಆಸ್ಪತ್ರೆಗೆ ಹೋಗಲು ಸೂಚಿಸಿದ್ದಾರೆ, ಈ ಗರ್ಭಿಣಿ ಮಹಿಳೆಗೆ ಹೊಟ್ಟೆ ನೋವು ಕಡಿಮೆ ಆಗಿದೆ ಎಂಬ ಕಾರಣಕ್ಕೆ ಮತ್ತೆ ಮರಳಿ ಮನೆಗೆ ಬಂದಿದ್ದಾರೆ. ನಂತರ ಸಂಜೆ 6 ಗಂಟೆಗೆ ಮರಳಿ ಹೊಟ್ಟೆ ನೋವು ತೀವ್ರ ಆದ ಕಾರಣ ಆಸ್ಪತ್ರೆಗೆ ಬಂದಿದ್ದಾರೆ. ಆದ್ರೆ ಆಗ ಆಸ್ಪತ್ರೆಯಲ್ಲಿ ಯಾರೊಬ್ಬರು ಇರಲಿಲ್ಲ. ಬಳಿಕ ಅಂಬ್ಯುಲೆನ್ಸ್ ಮೂಲಕ ಚಡಚಣ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಷ್ಟರಲ್ಲಿ ಮಾರ್ಗ ಮದ್ಯೆಯೇ ಹೆರಿಗೆಯಾಗಿದೆ.
ಇತ್ತೀಚೆಗೆ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಹೊಲಿಗೆ ಬಿಚ್ಚಿದ ಪ್ರಕರಣ ಸಾಕಷ್ಟು ಸುದ್ದಿಯಾಗಿ ವೈದ್ಯರ ನಡೆಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿತ್ತು. ಇದಾದ ಮೂರ್ನಾಲ್ಕು ದಿನದಲ್ಲೇ ಮತ್ತೊಂದು ಇಂತಹ ಮನಕಲುಕುವ ಘಟನೆ ನಡೆದಿದೆ. ಇನ್ನೂ ಪೂರ್ಣಿಮಾ ಮಾರ್ಗ ಮದ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.
ಅದುವಲ್ಲದೇ, ಜಿಗಜಿವಣಗಿ ಆರೋಗ್ಯ ಕೇಂದ್ರದ ಹೆರಿಗೆ ಮಾಡಿಸುತ್ತಿದ್ದ ನರ್ಸ ಜಯಮಾಲಾ ಮಕ್ಕಳ ಸಾಕಾಣಿಕೆ ಮತ್ತು ಮಾರಾಟ ಆರೋಪದಡಿ ಜೇಲ್ ಸೆರಿದ್ದು, ಇದರ ವಿಷಯವಾಗಿ ಆಸ್ಪತ್ರೆ ಸಿಬ್ಬಂದಿ ಇಬ್ಬರು ವಿಜಯಪುರಕ್ಕೆ ತೆರಳಿದ್ದರು. ಇನ್ನುಳಿದಂತೆ ಸಿಬ್ಬಂದಿ ಆಸ್ಪತ್ರೆಯಲ್ಲಿದ್ದರು. ಆದ್ರೆ ಅವರು ಹೆರಿಗೆ ಮಾಡಿಸುವವರಾಗದ ಕಾರಣ ಗರ್ಭಿಣಿ ಕುಟುಂಬಸ್ಥರಿಗೆ ಚಡಚಣಗೆ ಹೋಗಲು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. ಆದ್ರೆ ಅವರು ಹೋಗದೆ ಮನೆಗೆ ತೆರಳಿ ನಂತರ ಆಸ್ಪತ್ರೆಗೆ ಬಂದಿದ್ದಾರೆ. ಅದಾದ ಮೇಲೆ ಅವರಿಗೆ ಆಸ್ಪತ್ರೆ ಸಿಬ್ಬಂದಿಯೇ ಚಡಚಣ ಆಸ್ಪತ್ರೆಗೆ ರೆಫರ್ ಮಾಡಿ ಕಳುಹಿಸಿದ್ದಾರೆ. ಆದ್ರೂ ಕೂಡ ಈ ಘಟನೆ ನಡೆಯಬಾರದಿತ್ತು. ಇದಕ್ಕೆ ಬೇಸರ ಇದೆ. ಈ ಪ್ರಕರಣದ ಬಗ್ಗೆ ಪರಿಶಿಲನೆ ನಡೆಸಿ, ಸೂಕ್ತ ತನಿಖೆ ಕೈಗೊಳ್ಳುತ್ತೇವೆ ಎಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಜಿ ಕೇಡಿ ಹೇಳಿದ್ದಾರೆ.
ಅದೇನೆ ಇರಲಿ 24*7 ಆಸ್ಪತ್ರೆ ಅಂದ ಮೇಲೆ ಯಾರಾದ್ರೂ ಆಸ್ಪತ್ರೆ ಇರಲೇಬೇಕು. ಗರ್ಭಿಣಿ ಆಸ್ಪತ್ರೆಗೆ ಬಂದು ಗಂಟೆಗೂ ಹೆಚ್ಚು ನರಳಾಡಿದ್ದಾಳೆ. ವೈದ್ಯರಿದ್ದಿದ್ರೆ ಇಂತಹ ಪರಿಸ್ಥಿತಿ ಆಗುತ್ತಿರಲಿಲ್ಲ. ಈಗಲಾದ್ರೂ ಎಚ್ಚೆತ್ತು ಜಿಲ್ಲಾ ವೈದ್ಯಾಧಿಕಾರಿಗಳು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಅಂತಾ ಪೂರ್ಣಿಮಾ ಕುಟುಂಬಸ್ಥರು ಹಾಗೂ ಪ್ರಜ್ಞಾವಂತರು ಆಗ್ರಹಿಸಿದ್ದಾರೆ.