Saturday, May 18, 2024

ಬೆಲೆ ಏರಿಕೆಯ ವಿರುದ್ಧ ‘ಕೈ’ ಸಮರ

ಬೆಂಗಳೂರು : ದೇಶದೆಲ್ಲೆಡೆ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಿದೆ.‌ ಪ್ರತಿದಿನವೂ ಒಂದಲ್ಲ‌ ಒಂದು ವಸ್ತುಗಳ ಬೆಲೆ ಏರುತ್ತಲೇ ಇದೆ. ಇದನ್ನೇ ಬಿಜೆಪಿ‌ ವಿರುದ್ಧ ದಾಳವಾಗಿ ಬಳಸಿ ಬಿಜೆಪಿಯ ವಿರುದ್ದ ಜನಾಭಿಪ್ರಾಯ ‌ಮೂಡಿಸಲು ಕಾಂಗ್ರೆಸ್ ಮುಂದಾಗಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ‌ಏರಿಕೆಯಾಗಿದೆ. ಇದನ್ನೇ‌ ಮುಂದಿನ ಚುನಾವಣೆಯಲ್ಲಿ ‌ಬಿಜೆಪಿ ವಿರುದ್ಧ ಪ್ರಯೋಗಿಸಲು ಕಾಂಗ್ರೆಸ್ ‌ಸಿದ್ಧವಾಗಿದೆ.‌ ಇದಕ್ಕೆ ಆರಂಭ ಎಂಬಂತೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಂಟಿಸುದ್ದಿಗೋಷ್ಠಿ ನಡೆಸಿ ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಕಿಡಿ ಕಾರಿದ್ರು. ಸರ್ಕಾರ ತನ್ನ ಎಲ್ಲಾ ವೈಫಲ್ಯಗಳನ್ನು ಮುಚ್ಚಿ ಹಾಕಲು ಹಿಜಾಬ್, ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ವ್ಯಾಪಾರ ಮಾಡದಂತೆ ನಿರ್ಬಂಧ, ಕಾಶ್ಮೀರಿ ಫೈಲ್ಸ್, ಹಲಾಲ್, ಗೋಹತ್ಯೆ, ಮತಾಂತರ ಮುಂತಾದ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ.ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆಯನ್ನು ಎದ್ವಾತದ್ವಾ ಏರಿಕೆ ಮಾಡಿದೆ. ಯುಗಾದಿ ಸಿಹಿ – ಕಹಿಗಳ ಹಬ್ಬ, ಆದರೆ ಕೇಂದ್ರ ಸರ್ಕಾರ ಜನರಿಗೆ ಬರೀ ಕಹಿಯನ್ನು ನೀಡಿದೆ. ಒಂದು ಚೀಲ ಗೊಬ್ಬರದ ಮೇಲೆ 150 ರೂ. ಏರಿಕೆಯಾಗಿದೆ. ಇದ್ರಿಂದ ಕೇಂದ್ರ ಸರ್ಕಾರ ರೂ. 3,600 ಕೋಟಿಯನ್ನು ರೈತರಿಂದ ಹೆಚ್ಚುವರಿ ಹಣ ಸುಲಿಗೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2022 ಕ್ಕೆ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು, ಅದನ್ನು ಮಾಡುವ ಬದಲು ರೈತರ ರಕ್ತ ಕುಡಿಯಲು ಆರಂಭ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಸರ್ಕಾರ ನೀಡುವ ಕಾರಣವೆಂದರೆ ‘ಪೆಟ್ರೋಲ್ ಮಾರಾಟ ಮಾಡುವ ಸ್ವಾಯತ್ತ ಸಂಸ್ಥೆಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಳಿತಗಳಿಗೆ ಅನುಗುಣವಾಗಿ ಬೆಲೆ ಏರಿಕೆ ಮಾಡುತ್ತಿದೆ ಎಂದು‌ ಬಿಜೆಪಿ‌ ಹೇಳುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಮಾಡುವುದು ಸ್ವಾಯತ್ತ ಸಂಸ್ಥೆಗಳಾಗಿದ್ದರೆ ಕಳೆದ ವರ್ಷ ನವೆಂಬರ್ ನಿಂದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬರುವವರೆಗೆ ಅಂದರೆ ಮಾರ್ಚ್ ಹದಿನೈದರವರೆಗೆ ಏಕೆ ದರ ಏರಿಕೆಯಾಗಿರಲಿಲ್ಲ? ಪೆಟ್ರೋಲ್ ಬೆಲೆ ನಿಯಂತ್ರಣ ಯಾರ ಕೈಲಿದೆ ‌ಎಂದು ಕೈ ನಾಯಕರು ಪ್ರಶ್ನಿಸಿದ್ದಾರೆ. ಹಾಗೇ‌ ಅಡುಗೆ ಅನಿಲದ ಬೆಲೆ ವಿಚಾರದಲ್ಲೂ ಸರ್ಕಾರ ಸುಲಿಗೆ ಮುಂದುವರಿಸಿ ಜನರನ್ನು ಕಾಡುತ್ತಿದೆ. ಈ ವಿಚಾರವಾಗಿ ಮಹಿಳೆಯರನ್ನು ಕೇಳಿದರೆ ಗೊತ್ತಾಗುತ್ತದೆ. ಹೀಗಾಗಿ ನಾವು ಇತ್ತೀಚೆಗೆ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ಮಾಡಿದ್ದೆವು.ಈ ಪ್ರತಿಭಟನೆ ಇಲ್ಲಿಗೆ ನಿಲ್ಲುವುದಿಲ್ಲ, ಮುಂದುವರಿಯುತ್ತದೆ. ಜನರ ಹಿತ ಕಾಯುವುದಕ್ಕೆ ಕಾಂಗ್ರೆಸ್ ಪಕ್ಷ ಇದೆ. ಕೆಲವು ರಾಜ್ಯಗಳಲ್ಲಿ ಹಿನ್ನಡೆಯಾದ ಮಾತ್ರಕ್ಕೆ ನಾವು ಧೃತಿಗೆಡುವ ಅಗತ್ಯವಿಲ್ಲ. ನಾವು ಜನರ ಪರವಾಗಿ, ಅವರ ಸಮಸ್ಯೆ ವಿಚಾರವಾಗಿ ಹೋರಾಟ ಮಾಡುತ್ತೇವೆ. ಈ ವಿಚಾರವಾಗಿ ಜನರಿಗೆ ತಿಳುವಳಿಕೆ ಕೊಟ್ಟು ಈ ಸರ್ಕಾರವನ್ನು ಕಿತ್ತೊಗೆಯುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಗುಡುಗಿದರು.

ಒಟ್ಟಿನಲ್ಲಿ ಈ‌ ಬಾರಿ ಬಿಟ್ ಕಾಯಿನ್, 40% ಕಮಿಷನ್ ಅಸ್ತ್ರವು ಕಾಂಗ್ರೆಸ್ ‌ಪಕ್ಷವನ್ನೇ ಸುತ್ತುತ್ತಿತ್ತು. ಹೀಗಾಗಿ ಬೆಲೆ ಏರಿಕೆ ಅಸ್ತ್ರವನ್ನು ಪರಿಣಾಮಕಾರಿಯಾಗಿ ಜನರ ಮುಂದಿಡಲು‌ ಕಾಂಗ್ರೆಸ್ ಹೊರಟಿದೆ. ಇದು ಎಷ್ಟರ ಮಟ್ಟಿಗೆ ಕಾಂಗ್ರೆಸ್‌ಗೆ ಸಹಕಾರಿ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES