Friday, May 17, 2024

ರಾಜ್ಯ ಕಾಂಗ್ರೆಸ್‌ನಲ್ಲಿ ಮುಗಿಯದ ರಾಜಕೀಯ..!

ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರಬೇಕು ಅಂತ ಕಾಂಗ್ರೆಸ್ ಈಗಿನಿಂದಲೇ ಪ್ರಯತ್ನ ನಡೆಸಿದೆ. ಕಾಂಗ್ರೆಸ್ ಹೈಕಮಾಂಡ್ ಕೂಡ ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡಿ ಅಂತ ರಾಜ್ಯ ನಾಯಕರಿಗೆ ಹಲವು ಬಾರಿ ಎಚ್ಚರಿಕೆ ನೀಡಿದೆ. ಆದರೆ ರಾಜ್ಯದ ಕೈ ನಾಯಕರ ನಡುವೆ ಸಮನ್ವಯ ಕೊರತೆ ಮೇಲಿಂದ ಮೇಲೆ ಕಾಣಿಸುತ್ತಲೇ ಇದೆ. ಇದರ ಪ್ರಭಾವ ಯುವ ಕಾಂಗ್ರೆಸ್ ಮುಖಂಡರ ಮೇಲೆ ಬೀರಿದೆ. ಹೊಸ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಶಕ್ತಿ ತುಂಬಿ, ಪಕ್ಷ ಸಂಘಟನೆ ಮಾಡುವಲ್ಲಿ ಯುವ ಕಾಂಗ್ರೆಸ್ ಪಾತ್ರ ದೊಡ್ಡದಿದೆ. ಆದರೆ, ಅಧಿಕಾರ ಹಂಚಿಕೆ ಅಸಮಧಾನ ವಿಚಾರವಾಗಿ ರಕ್ಷಾ ರಾಮಯ್ಯ ಮತ್ತು ನಲಪಾಡ್ ನಡುವೆ ಶೀತಲ ಸಮರ ನಡೆಯುತ್ತಲೇ ಇತ್ತು. ಒಳಗೊಳಗೆ ಕುದಿಯುತ್ತಿದ್ದ ಅಸಮಾಧಾನ ಈಗ ಬಹಿರಂಗವಾಯ್ತು. ನಲಪಾಡ್ ಪದಗ್ರಹಣ ಕಾರ್ಯಕ್ರಮದಲ್ಲಿ ಅಧಿಕಾರ ಹಸ್ತಾಂತರ ಮಾಡಲು ರಕ್ಷಾ ರಾಮಯ್ಯ ಬಾರದೆ ಇದ್ದದ್ದು ಕಾಂಗ್ರೆಸ್ ಭಿನ್ನಮತವನ್ನು ಎತ್ತಿತೊರಿಸುವಂತಿತ್ತು.

ಕಳೆದ ಒಂದು ವರ್ಷದಿಂದ ನಲಪಾಡ್ ಮತ್ತು ರಕ್ಷಾ ರಾಮಯ್ಯ ನಡುವೆ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಕಿತ್ತಾಟ ನಡೆಯುತ್ತಲೇ ಇತ್ತು. ಕೊನೆಗೆ ಹಿರಿಯರು ಮಧ್ಯೆ ಪ್ರವೇಶ ಮಾಡಿ ರಕ್ಷಾ ರಾಮಯ್ಯ ಒಂದು ವರ್ಷ, ನಲಪಾಡ್ ಎರಡು ವರ್ಷ ಅಂತ ಅಧಿಕಾರ ಹಂಚಿಕೆ ಮಾಡಿದರು. ಅದರಂತೆ ರಕ್ಷಾ ರಾಮಯ್ಯ ಅಧಿಕಾರ ಸ್ವೀಕಾರ ಮಾಡುವಾಗ ನಲಪಾಡ್ ಕಾರ್ಯಕ್ರಮಕ್ಕೆ ಗೈರಾಗಿ ಅಸಮಧಾನ ಹೊರಹಾಕಿದ್ರು. ಜನವರಿಗೆ ಅಧಿಕಾರ ಮುಗಿದು ನಲಪಾಡ್ ಪದಗ್ರಹಣ ಮಾಡುವಾಗ ಅಧಿಕಾರ ಹಸ್ತಾಂತರ ಮಾಡಬೇಕಾದ ರಕ್ಷಾ ರಾಮಯ್ಯ ಚಕ್ಕರ್‌ ಹಾಕಿದ್ರು. ಸ್ಟೇಜ್ ಮೇಲೆ ಬರುವಂತೆ ಹಲವು ಬಾರಿ ಮನವಿ ಮಾಡಿದ್ರೂ ರಕ್ಷಾ ಬರಲೇ ಇಲ್ಲ. ಇದು ಕಾಂಗ್ರೆಸ್ ಮುಖಂಡರಿಗೆ ಇರಸುಮುರುಸಾಯಿತು. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಮ್ಮ ಭಾಷಣ ವೇಳೆ ಯುವ ಮುಖಂಡರಿಗೆ ಎಚ್ಚರಿಕೆ ನೀಡಿದ್ದರು.

ಇನ್ನೂ ಯುವ ಕಾಂಗ್ರೆಸ್ ಪದಗ್ರಹಣ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟವರು ಯಾರು ಎಂಬ ಪ್ರಶ್ನೆ ಎದ್ದಿದೆ. ಯಾಕೆಂದರೆ ಕೊವಿಡ್ ಮಾರ್ಗಸೂಚಿ ಅನ್ವಯ ರಾಜಕೀಯ ಕಾರ್ಯಕ್ರಮ ಮಾಡುವಂತಿಲ್ಲ. ಜೊತೆಗೆ ಮೂನ್ನೂರು ಜನರು ಒಳಾಂಗಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಿದೆ ಸರ್ಕಾರ. ಇವೆರಡು ನಿಯಮ ಮೀರಿ ಸಾವಿರಾರು ಜನರು ಸೇರಿಸಿ ರಾಜಕೀಯ ಕಾರ್ಯಕ್ರಮ ಮಾಡಬೇಕಾ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆ ಎದ್ದಿದೆ. ಅಂದರೆ ಆಳುವವರಿಗೊಂದು ನ್ಯಾಯ. ಸಾಮಾನ್ಯ ಜನರಿಗೆ ಮತ್ತೊಂದು ನ್ಯಾಯವಾ ಅನ್ನುವಂತಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಉತ್ತರ ನೀಡಬೇಕಿದೆ.

RELATED ARTICLES

Related Articles

TRENDING ARTICLES