Friday, May 17, 2024

ವಿಶ್ವದಾಖಲೆ ಬರೆದ ಜೊನಾಥನ್ ಆಮೆ

ಆಮೆಗಳು ಅಂದ್ರೆ ಪುಟಾಣಿ ಮಕ್ಕಳಿಂದ ಹಿಡಿದು, ಹಿರಿಯರವರೆಗೂ ಕುತೂಹಲದಿಂದ ನೋಡುವ ಪ್ರಾಣಿ, ಆಮೆಗಳು ಅದೆಷ್ಟೇ ಮಂದಗತಿಯ ಜೀವಿಗಳಾದರು, ಅವುಗಳ ಚಲನೆ ವಲನೆ ಹಾಗು ಆಮೆಯ ದೇಹದ ಸುತ್ತ ಆವರಿಸಿರುವ ಚಿಪ್ಪು ಎಲ್ಲರನ್ನ ಬೇಗ ಆಕರ್ಶಿಸುತ್ತದೆ. ಸಾಧರಣವಾಗಿ ಚಿಪ್ಪಿನ ಆಕಾರ ಹೊಂದಿರುವ ಆಮೆಗಳು ಸರೀಸೃಪ ಜಾತಿಗೆ ಸೇರಿದ್ದು, ಇವುಗಳ ಚಿಪ್ಪನ್ನ ವಿಶೇಷ ಎಲುಬು ಅಂತ ಪರಿಗಣಿಸಲಾಗುತ್ತದೆ. ಈ ಚಿಪ್ಪು ಅಮೆಗಳ ಪಕ್ಕೆಲಬುಗಳಿಂದ ಬೆಳವಣಿಗೆ ಹೊಂದಿ ಕವಚದ ಆಕಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಹೀಗಾಗಿ ಆಮೆಗಳನ್ನ ಚಿಪ್ಪಿರುವ ಪ್ರಾಣಿವರ್ಗಕ್ಕೆ ಕೂಡ ಸೇರಿಸಬಹುದು. ಆಮೆಗಳನ್ನ ಹಾವು ಹಾಗು ಹಲ್ಲಿಗಳಿಗಿಂತಲು ಅತ್ಯಂತ ಪುರಾತನ ಜೀವಿ ಅಂತ ಹೇಳಲಾಗುತ್ತದೆ.

ಜಗತ್ತಿನಲ್ಲಿರುವ ಬಹುತೇಖ ಆಮೆಗಳು ದೀರ್ಘಾಯುಷಿಗಳಾಗಿದ್ದು, ಕೆಲವು ಆಮೆಗಳು 100ಕ್ಕೂ ಅಧಿಕ ವರ್ಷ ಬದುಕುತ್ತವೆ. ಇವುಗಳ ಜೀವಿತಾವಧಿಯ ಬಗ್ಗೆ ಹಲವು ವರ್ಷಗಳಿಂದ ಅಧ್ಯಾಯನ ನಡೆಸಲಾಗುತ್ತಿದ್ದು, ಇವುಗಳು ಸೇವಿಸುವ ಮಿತ ಆಹಾರ ಹಾಗು ಇವುಗಳು ಬದುಕುವ ರೀತಿ ಇದರ ಆಯಸ್ಸು ಹೆಚ್ಚಾಗುವಂತೆ ನೋಡಿಕೊಳ್ಳುತ್ತಿದೆ ಎಂದು ಹಲವು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಇದುವರೆಗೆ ಸಾಕಷ್ಟು ಆಮೆಗಳು 100 ಕ್ಕೂ ಅಧಿಕ ವರ್ಷಗಳ ಕಾಲ ಬದುಕಿದ್ದು, ಇವು ಜನ ಸಮಾನ್ಯರ ಕುತೂಹಲಕ್ಕೆ ಕೂಡ ಕಾರಣವಾಗಿದೆ. ಸದ್ಯಕ್ಕೆ ಇಂತಹುದೆ ಒಂದು ಆಮೆ ತಾನಿ ಅಧಿಕ ವರ್ಷ ಬದುಕಿದ್ದೇನೆ ಅಂತ ಈ ಜಗತ್ತಿಗೆ ಸಾಬೀತು ಮಾಡಿ ಗಿನ್ನೀಸ್​ ದಾಖಲೆಯನ್ನ ಬರೆದಿದೆ.

ವಿಶ್ವದ ಅತ್ಯಂತ ಹಳೆಯ ಆಮೆ ಎಂದು ಗುರುತಿಸಲಾಗಿರುವ ಜೊನಾಥನ್ ಈಗ ಗಿನ್ನೆಸ್ ವಿಶ್ವ ದಾಖಲೆಗೆ ಸೇರಿದೆ. ಈ ಮೂಲಕ ವಿಶ್ವದ ಅತೀ ಹಳೆಯ ಜೀವಂತ ಭೂ ಪ್ರಾಣಿ ಅನ್ನೋ ಖ್ಯಾತಿಯನ್ನ ಕೂಡ ಗಳಿಸಿದೆ. ಬ್ರಿಟಿಷ್ ಸಾಗರೋತ್ತರ ಪ್ರದೇಶವಾದ ಸೇಂಟ್ ಹೆಲೆನಾ ದ್ವೀಪದಲ್ಲಿರುವ ಈ ಜೊನಾಥನ್ ಆಮೆ. ಇದೀಗ ತನ್ನ 190 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ. ಜಗತ್ತಿನಲ್ಲಿರುವ ಎಲ್ಲಾ ಆಮೆಗಳು, ಟೆರಾಪಿನ್‌ಗಳು ಮತ್ತು ಆಮೆಗಳನ್ನು ಒಳಗೊಂಡಿರುವ ವಿಶ್ವದ ಅತ್ಯಂತ ಹಳೆ ಆಮೆಗಳಲ್ಲಿ ಈ ಆಮೆ ಅತ್ಯಂತ ಹಳೆಯದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯಕ್ಕೆ ಈ ಬಗ್ಗೆ ಮಾಹಿತಿ ನೀಡಿರುವ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‌ಸೈಟ್, ಜೊನಾಥನ್ 1832 ರಲ್ಲಿ ಜನಿಸಿದೆ ಅಂತ ತಿಳಿಸಿದೆ, ಹಾಗಾಗಿ 2022 ರಲ್ಲಿ ಇದಕ್ಕೆ 190 ವರ್ಷ ವಯಸ್ಸಾಗಿದೆ ಸ್ಪಷ್ಟವಾಗಿ ತನ್ನ ವೆಬ್​ಸೈಟ್​ನಲ್ಲಿ ಉಲ್ಲೇಖಿಸಿದೆ.

ಈ ಬಗ್ಗೆ ಹಲವು ಪತ್ರಿಕೆಗಳು ವರದಿ ಮಾಡಿದ್ದು ಅವರ ಪ್ರಕಾರ, ಈ ಆಮೆ 1882 ರಲ್ಲಿ ಸೇಶೆಲ್ಸ್‌ನಿಂದ ಸೇಂಟ್ ಹೆಲೆನಾಗೆ ಬಂದಿದೆ. ಆಗಲೇ ಈ ಆಮೆ ಸುಮಾರು 50 ವರ್ಷ ವಯಸ್ಸಾಗಿತ್ತು ಅಂತ ಮಾಹಿತಿ ನೀಡಿದ್ದಾರೆ. ಈಗ ಆ ವರದಿಯೊಡನೆ ಈ ದಾಖಲೆಯನ್ನ ಪರಿಶೀಲಿಸಿದಾಗ ಜೊನಾಥನ್​ ಆಮೆಗೆ 190 ವರ್ಷ ವಯಸ್ಸಾಗಿರೋದು ದೃಢವಾಗುತ್ತೆ. ಇನ್ನು ಈ ಜೊನಾಥನ್ ಆಮೆಗಿಂತ ತುಯಿ ಮಲಿಲಾ ಅನ್ನೋ ಆಮೆ ಈ ಹಿಂದೆ ವಿಶ್ವದ ಅತ್ಯಂತ ಹಳೆಯ ಆಮೆ ಹಾಗು ದೀರ್ಘಾಕಾಲ ಬದುಕಿದ್ದ ಏಕೈಕ ಆಮೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು, ತುಯಿ ಮಲಿಲಾ ಸುಮಾರು188 ವರ್ಷ ಬದುಕಿತ್ತು. ಈ ಆಮೆಯನ್ನ ಕ್ಯಾಪ್ಟನ್ ಕುಕ್ ಎಂಬ ವ್ಯಕ್ತಿ 1777 ರಲ್ಲಿ ಟೋಂಗಾ ರಾಜಮನೆತನಕ್ಕೆ ದಾನ ಮಾಡಿದ್ದ, ಅಲ್ಲಿಂದ 1965 ರಲ್ಲಿ ಈ ಆಮೆ ಸಾಯುವವರೆಗೂ ಆ ರಾಜ ಮನೆತನದ ಆರೈಕೆಯಲ್ಲಿಯೇ ಇತ್ತು ಅಂತ ಹೇಳಲಾಗುತ್ತದೆ.

ಸದ್ಯಕ್ಕೆ ಸೇಂಟ್ ಹೆಲೆನಾ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಜೊನಾಥನ್ ಚಳಿಗಾಲದ ಕಾರಣದಿಂದ ಅನಾರೋಗ್ಯದಿಂದ ಬಳಲಿದ್ದು, ಈಗ ಆರೋಗ್ಯವಾಗಿದೆ ಅಂತ ವೈದ್ಯರು ಹೇಳ್ತಾ ಇದ್ದಾರೆ, ಒಟ್ಟಾರೆಯಾಗಿ ಇದೀಗ ಈ ಆಮೆ ವಿಶ್ವದ ಅತ್ಯಂತ ಹಳೆಯ ಆಮೆ ಅನ್ನೋ ದಾಖಲೆಯನ್ನ ಬರೆದಿದ್ದು ಇದರ ಆರೋಗ್ಯದ ಬಗ್ಗೆ ವೈದ್ಯರು ಹೆಚ್ಚಿನ ನಿಗಾ ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಲಿಖಿತ್​​ ರೈ , ಪವರ್​​ ಟಿವಿ

RELATED ARTICLES

Related Articles

TRENDING ARTICLES