Monday, December 23, 2024

ಒಂದು ಮೀನಿನ ಬೆಲೆ 1 ಕೋಟಿ ರೂಪಾಯಿ

ಜಪಾನ್​ ಅಂದ್ರೆನೆ ಹಾಗೆ ಅಲ್ಲಿನ ಸಂಸ್ಕೃತಿ, ಅಚಾರ-ವಿಚಾರ, ಹಾಗು ತಂತ್ರಜ್ಞಾನ ಎಲ್ಲಾ ರಾಷ್ಟ್ರಗಳಿಂದ ಸಾಕಷ್ಟು ಭಿನ್ನ, 2ನೇ ವಿಶ್ವ ಯುದ್ಧದಲ್ಲಿ ಹೀನಾಯವಾಗಿ ಸೋತಿದ್ದ ಜಪಾನ್,​ ಬಳಿಕ ತನ್ನ ರಾಷ್ಟ್ರದ ಅಭಿವೃದ್ಧಿ ಹಾಗು ಸಂಸ್ಕೃತಿಯ ಉಳಿವಿನ ಬಗ್ಗೆ ಹೆಚ್ಚು ಗಮನ ಹರಿಸಿತ್ತು. ಇದೇ ಸಂಸ್ಕೃತಿಯ ಉಳಿವಿನ ಭಾಗವಾಗಿ ಜಪಾನ್​ ತನ್ನ ಪಾರಂಪರಿಕ ಆಹಾರ ಪದ್ಧತಿಯನ್ನ ಕೂಡ ಉಳಿಸಿಕೊಂಡು ಬಂದಿತ್ತು. ಇವತ್ತು ಜಪಾನ್​ನ ಜನಸಂಖ್ಯೆಯಲ್ಲಿ 10ನೆಯ 1 ರಷ್ಟು ಜನ ಮೀನನ್ನ ತಮ್ಮ ದೈನಂದಿನ ಆಹಾರವಾಗಿ ಸೇವನೆ ಮಾಡುತ್ತಾರೆ. ಹಾಗಾಗಿ ಜಪಾನ್​ ಇವತ್ತು ಅತಿ ಹೆಚ್ಚು ಮೀನು ತಿನ್ನುವ ರಾಷ್ಟ್ರಗಳ ಪೈಕಿ ಮೂರನೇ ಸ್ಥಾನದಲ್ಲಿದೆ.

ಇದರ ಜೊತೆಗೆ ಜಪಾನ್​ನ ಆರ್ಥಿಕತೆಗೆ ಕೂಡ ಇದೇ ಮೀನುಗಾರಿಕೆ ಸಾಕಷ್ಟು ಕೊಡುಗೆಯನ್ನ ಕೂಡ ನೀಡುತ್ತಾ ಬಂದಿದೆ. ಇದು ಅಲ್ಲಿನ ಕರಾವಳಿ ಜನತೆಯ ಬದುಕಿನ ಮೂಲ ಆಧಾರವಾಗಿ ಗುರುತಿಸಿಕೊಂಡು ಬಂದಿದೆ. ಅದೇ ರೀತಿ ಜಪಾನ್​ನ ಮೀನು ಮಾರುಕಟ್ಟೆ ಸದಾ ಒಂದಲ್ಲ ಒಂದು ಕಾರಣದಿಂದ ಸುದ್ದಿ ಮಾಡುತ್ತಲೇ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಅಲ್ಲಿ ಪದೇಪದೆ ಸಿಗುವ ಅಪರೂಪದ ಮೀನುಗಳು, ಹೀಗೆ ಅಲ್ಲಿ ಸಿಗುವ ಮೀನುಗಳು ಅದರ ವಿಶೇಷತೆಯಿಂದ ಸಾಕಷ್ಟು ಸುದ್ದಿ ಮಾಡುತ್ತವೆ. ಇಲ್ಲ ಅಂದ್ರೆ ಅದರ ಬೆಲೆಯಿಂದ ವಿಶ್ವವನ್ನೇ ನಿಬ್ಬೆರಗಾಗಿಸುತ್ತದೆ. ಇದೀಗ ಜಪಾನ್​ನಲ್ಲಿ ಪತ್ತೆಯಾಗಿರುವ ಅಪರೂಪದ ಮೀನು ಕೂಡ ಜಗತ್ತಿನ ಗಮನ ಸೆಳೆದಿದ್ದು, ಇದೀಗ ಮೀನಿನ ಬೆಲೆ ಕೇಳಿ ಸಾಮಾನ್ಯ ಜನರು ದಂಗಾಗಿ ಹೋಗಿದ್ದಾರೆ.

ಸಾಧರಣವಾಗಿ ಒಂದು ಕೆ.ಜಿ ಮೀನಿನ ಬೆಲೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಾಗು ಆಯಾ ಮೀನಿನ ಮೌಲ್ಯದ ಆಧಾರದ ಮೇಲೆ ನಿಗಧಿಯಾಗಿರುತ್ತದೆ. ಹಲವು ಕಡೆಗಳಲ್ಲಿ ಒಂದು ಕೆ.ಜಿ ಮೀನಿಗೆ 300 ರೂಪಾಯಿ ಇದ್ರೆ. ಕೆಲವು ಕಡೆಗಳಲ್ಲಿ 600 ರೂಪಾಯಿಯಾಗಿರುತ್ತದೆ. ಅಪರೂಪದ ಮೀನುಗಳಿಗೆ ಅಬ್ಬಾಬ್ಬ ಅಂದ್ರೆ 1500 ರೂಪಾಯಿ ನಿಗಧಿಯಾಗಿರುತ್ತದೆ. ಅದರಲ್ಲೂ ಕೆಲವೊಂದು ತಳಿಯ ಮೀನು ಸಿಕ್ಕರಂತೂ ಹರಾಜಿನಲ್ಲಿ 5ರಿಂದ 10 ಸಾವಿರ ರೂಪಾಯಿಗೆ ಮಾರಾಟವಾಗುತ್ತದೆ ಆದ್ರೆ ಈಗ ಜಪಾನ್​ನಲ್ಲಿ ಸೆರೆಸಿಕ್ಕಿರುವ ಮೀನೊಂದರ ಬೆಲೆ ಎಲ್ಲರ ಹುಬ್ಬೇರಿಸ್ತಾ ಇದೆ. ಯಾಕಂದ್ರೆ ಈ ಮೀನಿನ ಬೆಲೆ ಒಂದು ಕೆ.ಜಿಗೆ ಬರೋಬ್ಬರಿ 51 ಸಾವಿರ ರೂಪಾಯಿ.
ಈ ಸುದ್ದಿ ಅಚ್ಚರಿಯಾದ್ರು ಅಕ್ಷರಶಃ ನಿಜ, ಅಷ್ಟಕ್ಕೂ ಈ ಮೀನಿನ್ನ ಬ್ಲೂಫಿನ್​ ಟ್ಯೂನಾ ಅಂತ ಕರೆಯಲಾಗ್ತಾ ಇದ್ದು, ಜಪಾನ್​ನ ಟೋಕಿಯೋದಲ್ಲಿ ಈ ಮೀನು ದುಬಾರಿ ಬೆಲೆಗೆ ಮಾರಾಟವಾಗಿದೆ. ಭಾರತೀಯ ಕರೆನ್ಸಿಗೆ ಹೋಲಿಸಿದರೆ ಈ ಮೀನು ಸಾಕಷ್ಟು ದುಬಾರಿಯಾಗಿದೆ, ಆದ್ರೆ ಈ ಬಗ್ಗೆ ಮೀನಿನ ಮಾರುಕಟ್ಟೆ ಹೇಳುವ ಪ್ರಕಾರ, ಜಪಾನ್​ನಲ್ಲಿ ಮೂರನೇ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ಈ ಮೀನು ತುಂಬಾ ಕಡಿಮೆ ಬೆಲೆಗೆ ಬಿಕರಿಯಾಗಿದೆಯಂತೆ. ಇದು ಮತ್ಸ್ಯಾಹಾರ ಪ್ರಿಯರ ಅಚ್ಚರಿಗೆ ಕಾರಣವಾಗಿದೆ. ಸದ್ಯಕ್ಕೆ ಈ ಮೀನನ್ನ ಉತ್ತರ ಜಪಾನ್​ನ ಓಮಾದಲ್ಲಿ ಬಲೆಗೆ ಬೀಳಿಸಲಾಗಿದ್ದು, ಈ ಟ್ಯೂನಾ ಫಿಶ್ ಸುಮಾರು 211ಕೆ.ಜಿ ತೂಕವನ್ನ ಹೊಂದಿದೆ. ಹಾಗಾಗಿ ಈ ಮೀನಿನ ಬೆಲೆ ಕೋಟಿ ರೂಪಾಯಿ ದಾಟಿದೆ ಅಂತ ಜಪಾನಿನ ಮೀನು ಮಾರುಕಟ್ಟೆ ವರ್ತಕರ ಸಂಘ ಅಭಿಪ್ರಾಯ ಪಟ್ಟಿದೆ.

ಮೂಲಗಳ ಪ್ರಕಾರ ಈ ಇಡೀ ಮೀನನ್ನ ಹರಾಜಿನಲ್ಲಿ 1,45,290 ಡಾಲರ್​ಗೆ ಬಿಕರಿ ಮಾಡಲಾಗಿದ್ದು, ಭಾರತೀಯ ಕರೆನ್ಸಿಯ ಪ್ರಕಾರ ಮೀನಿನ ಬೆಲೆ 1,08,12,953 ರೂಪಾಯಿ ಆಗಿದೆ. ಜಪಾನಿನಲ್ಲಿ ಈ ಮೀನು 1 ಕೆ.ಜಿ 80 ಸಾವಿರ ಯೆನ್​ಗೆ ಮಾರಾಟವಾಗ್ತಾ ಇದ್ದು, ಭಾರತೀಯ ಕರೆನ್ಸಿಯ ಪ್ರಕಾರ 1 ಕೆ.ಜಿ 51,352 ರೂಪಾಯಿಗೆ ಮಾರಾಟವಗಿದೆ. ಆದ್ರೆ ಇದು ಅತಿ ಕಡಿಮೆ ಬೆಲೆ ಜಪಾನ್​ ಮೀನು ಮಾರುಕಟ್ಟೆ ಅಧಿಕಾರಿಗಳು ಹೇಳ್ತಾ ಇದ್ದಾರೆ. ಯಾಕಂದ್ರೆ ಬ್ಲೂಫಿನ್ ಟ್ಯೂನಾ ಮೀನು ಒಂದು ವರ್ಷದ ಹಿಂದೆ 20.84 ಮಿಲಿಯನ್ ಯೆನ್‌ಗಿಂತ ಕಡಿಮೆಯಿತ್ತು. ಆದ್ರೆ ಹೊಸ ತಳಿಯ ಕೊರೋನಾ ವೈರಸ್ ಸೋಂಕಿನ ಹರಡುವಿಕೆಯಿಂದಾಗಿ ಈ ಮೌಲ್ಯವು ಗಮನಾರ್ಹವಾಗಿ ಕುಸಿದಿದೆ ಅಂತ ಅಧಿಕಾರಿಗಳು ಹೇಳಿಕೆಯನ್ನ ನೀಡಿದ್ದಾರೆ. ಯಾಕಂದ್ರೆ ಈ ಬ್ಲೂಫಿನ್​ ಟ್ಯೂನಾ ಮೀನಿಗೆ ಕೊರೋನಾ ಸೋಂಕು ವಕ್ಕರಿಸೋದಕ್ಕೂ ಮೊದಲು ವಿಪರೀತವಾದ ಬೇಡಿಕೆಯಿತ್ತು. 2019ರಲ್ಲಿ ಈ ಮೀನನ್ನ 333.6 ಮಿಲಿಯನ್​ ಯೆನ್​ ನೀಡಿ ಖರೀದಿಸಿದ್ದರು, ಈ ದಾಖಲೆಯನ್ನ ಇದುವರೆಗೂ ಯಾವ ಬ್ಲೂಫಿನ್​ ಫಿಶ್​ಗಳು ಮುರಿದಿಲ್ಲ ಅಂತ ಹೇಳಲಾಗುತ್ತಿದೆ.

ಇದೀಗ ಈ ಮೀನನ್ನ ಒನೊಡೆರಾ ಫುಡ್ ಸರ್ವಿಸ್ ದುಬಾರಿ ಬೆಲೆ ನೀಡಿ ಖರಿದಿಸಿದ್ದು, ಟ್ಯೂನಾ ಮೀನುಗಳನ್ನ ನ್ಯೂಯಾರ್ಕ್ ಮತ್ತು ಶಾಂಘೈ ಸೇರಿದಂತೆ ಪ್ರಪಂಚದಾದ್ಯಂತ ಇರುವ, ಒನೊಡೆರಾದ 12 ಸುಶಿ ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಉಣ ಬಡಿಸಲಾಗುತ್ತದೆ ಅಂತ ಸಂಸ್ಥೆ ಅಧಿಕೃತವಾಗಿ ಮಾಹಿತಿಯನ್ನ ನೀಡಿದೆ. ಸದ್ಯಕ್ಕೆ ಸುಶಿ ರೆಸ್ಟೋರೆಂಟ್​ಗಳು ಮೊದಲೇ ದುಬಾರಿಸ ರೆಸ್ಟೋರೆಂಟ್​ ಅಂತ ಹೇಳಲಾಗ್ತಾ ಇದ್ದು ಈ ಮೀನಿನಿಂದ ತಯಾರಿಸುವ ಖಾದ್ಯಕ್ಕೆ ಎಷ್ಟು ಬೆಲೆ ಇರಬಹುದು ಅನ್ನೋ ಕುತೂಹಲ ಗರಿಗೆದರಿದೆ. ಒಟ್ಟಾರೆಯಾಗಿ ಟ್ಯಾನಾ ಮೀನು ತನ್ನ ದುಬಾರಿ ಮೌಲ್ಯದಿಂದ ವರ್ಷ ವರ್ಷ ಮತ್ಸ್ಯಾಹಾರ ಪ್ರಿಯರ ಗಮನ ಸೆಳೆಯುತ್ತಿರುವುದಂತು ಸುಳ್ಳಲ್ಲ.

ಲಿಖಿತ್​ ರೈ, ಪವರ್​ ಟಿವಿ 

RELATED ARTICLES

Related Articles

TRENDING ARTICLES