Friday, May 17, 2024

ಚುನಾವಣಾ ಆಯೋಗದಲ್ಲಿ ಮಹತ್ವದ ಬದಲಾವಣೆಗೆ ಅಸ್ತು

ಬೆಳಗಾವಿ : ಆಧಾರ್ ಆಧಾರಿತ ವೋಟರ್ ಐಡಿ ಕಾರ್ಡ್ ಸೇರಿದಂತೆ ಹಲವು ಚುನಾವಣಾ ಸಂಬಂಧಿ ಸುಧಾರಣೆಗಳನ್ನ ಹೊತ್ತ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ವಿಪಕ್ಷಗಳ ಸಾಕಷ್ಟು ಗದ್ದಲದ ನಡುವೆ ಅಂಗೀಕಾರಗೊಂಡ ಚುನಾವಣಾ ವ್ಯವಸ್ಥೆ ಸುಧಾರಣೆ ಮಸೂದೆ ಮಂಗಳವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾದಾಗಿನಿಂದ ಇದುವರೆಗೆ ಬೆರಳೆಣಿಕೆಯಷ್ಟು ಗಂಟೆಗಳ ಕಾಲ ಮಾತ್ರ ಕಲಾಪಗಳು ನಡೆದಿದೆ. ಇನ್ನೂ ಎರಡು ದಿನ ಕಳೆದರೆ ಅಧಿವೇಶನವು ಮುಗಿಯಲಿದೆ. ಒಂದೆಡೆ ವಿಪಕ್ಷಗಳು ಆರಂಭದಿಂದ ರೈತ ಮಸೂದೆಗಳ ಬಗ್ಗೆ, ಬೆಲೆ ಏರಿಕೆ, ರಾಜ್ಯಸಭೆಯ 12 ಸಂಸದರ ಅಮಾನತು ಮತ್ತು ಲಖೀಂಪುರ ಖೇರಿ ಪ್ರಕರಣ ಮುಂದಿಟ್ಟುಕೊಂಡು ಪ್ರತಿದಿನ ಗದ್ದಲ ಶುರು ಮಾಡಿವೆ. ಇದೆಲ್ಲದರ ನಡುವೆ ಅಧಿವೇಶನದ ಕೊನೆಯ ವಾರದಲ್ಲಿ ಆಡಳಿತಾರೂಢ ಬಿಜೆಪಿ ಮಹತ್ವದ ಚುನಾವಣಾ ವ್ಯವಸ್ಥೆ ಸುಧಾರಣೆ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಿದೆ.

ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಅನೇಕ ಪ್ರಸ್ತಾಪಗಳನ್ನ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಸೂದೆ ರೂಪಿಸಿತ್ತು. ಕಳೆದ ವಾರ ನಡೆದಿದ್ದ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿತ್ತು. ಭಾರತೀಯ ಚುನಾವಣಾ ಆಯೋಗ ಮುಂದಿಟ್ಟಿದ್ದ ಸುಧಾರಣೆಗಳಲ್ಲಿ ಪ್ರಮುಖವಾದುದು ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಜೋಡಣೆ. ಇದು ವೋಟರ್ ಐಡಿಯಲ್ಲಿ ನಿಖರತೆ ತರಲು ಮತ್ತು ನಕಲಿ ಐಡಿ ಸೃಷ್ಟಿಯಾಗದಂತೆ ನಿಯಂತ್ರಿಸಲು ತೆಗೆದುಕೊಳ್ಳಲಾಗುತ್ತಿರುವ ಸುಧಾರಣಾ ಕ್ರಮ ಎಂದು ಪರಿಗಣಿತವಾಗಿದೆ.

ಇನ್ನೂ ಮೊದಲ ಬಾರಿಗೆ ಮತದಾನ ಮಾಡಲಿರುವ ವ್ಯಕ್ತಿಗಳು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಒಂದು ವರ್ಷದಲ್ಲಿ ನಾಲ್ಕು ಬಾರಿ ಅವಕಾಶ ಪಡೆಯಬಹುದು. ಈಗಿರುವ ಕಾನೂನಿನಲ್ಲಿ ಪ್ರತಿ ವರ್ಷ ಜನವರಿ 1ರ ಒಳಗೆ 18 ವರ್ಷ ವಯಸ್ಸು ತುಂಬಿದವರು ಮತದಾರರಾಗಿ ನೊಂದಾಯಿಸಲು ಒಮ್ಮೆ ಮಾತ್ರ ಅವಕಾಶ ಇದೆ. ಚುನಾವಣಾ ವ್ಯವಸ್ಥೆ ಸುಧಾರಣಾ ಮಸೂದೆ ಅಧಿಕೃತವಾಗಿ ಎರಡು ಸದನಗಳಲ್ಲಿ ಅಂಗೀಕಾರವಾಗಿ, ರಾಷ್ಟ್ರಪತಿಗಳ ಅಂಕಿತವಾದ ಬಳಿಕ ನೋಂದಣಿ ಮಾಡಿಕೊಳ್ಳುವ ಅವಕಾಶಗಳ ಸಂಖ್ಯೆ ಹೆಚ್ಚಿಗೆ ಸಿಗಲಿದೆ.

ಇಷ್ಟಲ್ಲದೆ, ಇನ್ನೂ ಹಲವು ಚುನಾವಣಾ ಸುಧಾರಣೆಗಳನ್ನ ಈ ಮಸೂದೆ ಒಳಗೊಂಡಿದೆ. ಅನಿವಾಸಿ ಭಾರತೀಯರು, ವಲಸೆ ಕಾರ್ಮಿಕರು ಮೊದಲಾದವರಿಗೆ ಅಂಚೆ ಮತದಾನದ ಅವಕಾಶ ಕೊಟ್ಟು ಮತದಾರರ ಪುನಾವರ್ತನೆ ಆಗದಂತೆ ತಡೆಯುವುದು ಇನ್ನೊಂದು ಪ್ರಮುಖ ಸುಧಾರಣಾ ಕ್ರಮ ಆಗಿದೆ. ವಿವಿಧ ಐಐಟಿಯಿಂದ ದೊಡ್ಡ ತಂತ್ರಜ್ಞರೊಂದಿಗೆ ಚುನಾವಣಾ ಆಯೋಗ ಸಮಾಲೋಚನೆ ನಡೆಸಿ ರಿಮೋಟ್ ವೋಟಿಂಗ್ ಅಳವಡಿಕೆಗೆ ಸಂಶೋಧನೆ ಕೈಗೊಂಡಿತ್ತು. ರಿಮೋಟ್ ವೋಟಿಂಗ್ ಬಹಳ ಶ್ರಮ ವಹಿಸಿ ಮಾಡಿರುವ ಸುಧಾರಣಾ ಕ್ರಮವಾಗಿದೆ. ಹಾಗಾಗಿ, 2024ರ ಲೋಕಸಭಾ ಚುನಾವಣೆಯಷ್ಟರಲ್ಲಿ ಈ ದೂರ ಮತದಾನದ ಕನಸು ನನಸಾಗಬಹುದು.

RELATED ARTICLES

Related Articles

TRENDING ARTICLES